ಜಿಲ್ಲೆ

ಗ್ರಾಹಕ ಹಕ್ಕುಗಳ ಮನವರಿಕೆಗೆ ಜಾಗೃತಿ ದಿನ

ಚನ್ನಗಿರಿ: ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಅರಿವಿನ ಮಹತ್ವ ಮನವರಿಕೆ ಮಾಡಿಕೊಡುವ ಮತ್ತು ಜಾಗೃತಿ ಮೂಡಿಸಲು ರಾಷ್ಟ್ರೀಯ ಗ್ರಾಹಕ ದಿನ ಆಚರಿಸಲಾಗುತ್ತದೆ ಎಂದು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವಿಶ್ವನಾಥ್ ವಿ. ಮೂಗತಿ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರ ಸುರಕ್ಷತೆ ಕಾಯ್ದೆಯ ಪ್ರಕಾರ ಗ್ರಾಹಕರಾಗಿ ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿ ಪರಿಶೀಲಿಸಬೇಕು. ಈ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ವಿಚಾರ ಸಂಕಿರಣ, ಚರ್ಚಾಗೋಷ್ಠಿ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದರು.

ಮಾಹಿತಿ ಹಕ್ಕು, ಸುರಕ್ಷತೆ ಹಕ್ಕು, ಆಯ್ಕೆ ಹಕ್ಕು, ದೂರು ನೀಡುವ ಹಕ್ಕನ್ನು ಗ್ರಾಹಕರು ಪಡೆದಿರುತ್ತಾರೆ. ಖರೀದಿ ಮಾಡಿದ ವಸ್ತುವಿನಲ್ಲಿ ದೋಷ ಕಂಡುಬಂದಲ್ಲಿ ರಾಜ್ಯ ಮತ್ತು ಜಿಲ್ಲೆಗಳ ಗ್ರಾಹಕರ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು. ಗ್ರಾಹಕರ ಸೇವೆಯಲ್ಲಿ ವ್ಯತ್ಯಯವಾದಾಗ ಕಾನೂನಿನ ಮೊರೆ ಹೋಗಬಹುದು. 3 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳವರಿಗೆ ಕಾನೂನು ಸೇವೆ ಉಚಿತವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಎನ್.ಜೆ. ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ಉಪಾಧ್ಯಕ್ಷ ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಖಜಾಂಚಿ ವಿ.ಎ. ಮಲ್ಲಿಕಾರ್ಜುನ್, ವಕೀಲ ತಿಪ್ಪೇಶ್ ಇದ್ದರು.