ಹೊನ್ನಾಳಿ: ನಾವು ಎಂಬ ವಿಶಾಲ ಮನೋಭಾವ ಎಲ್ಲರಲ್ಲಿದ್ದರೆ ನ್ಯಾಯಾಲಯಗಳ ಮೊರೆ ಹೋಗುವವರ ಸಂಖ್ಯೆ ಕಡಿಮೆಯಾಗಿ, ಸ್ವಸ್ಥ ಸಮಾಜ ನಿರ್ವಣಕ್ಕೆ ಕೈಜೋಡಿಸಿದಂತಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಮಹಾವೀರ ಕರೆಣ್ಣವರ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಮಾರ್ಚ್ 8 ರಂದು ನಡೆಯುವ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೋರ್ಟಿನಲ್ಲೇ ನ್ಯಾಯ ಸಿಗಬೇಕೆಂದರೆ ಖಂಡಿತಾ ಸಿಗುತ್ತದೆ. ಆದರೆ ಸಮಯ ತೆಗೆದುಕೊಳ್ಳುತ್ತದೆ. ಯಾವುದೇ ಪ್ರಕರಣವಿದ್ದರೂ ರಾಷ್ಟ್ರೀಯ ಬೃಹತ್ ಅದಾಲತ್ನಲ್ಲಿ ರಾಜಿ- ಸಂಧಾನದ ಮುಖಾಂತರ ಬಗೆಹರಿಸಿಕೊಂಡರೆ ನೆಮ್ಮದಿಯ ಜೀವನ ಸಾಗಿಸಲು ಅನುಕೂಲವಾಗುತ್ತದೆ. ವಕೀಲರು ತಮ್ಮ ಕಕ್ಷಿದಾರರಿಗೆ ಬೃಹತ್ ಅದಾಲತ್ನ ಸಲಹೆ ನೀಡಿ ನ್ಯಾಯ ಕೊಡಿಸಿ ಎಂದು ತಿಳಿಸಿದರು.
ಹೊನ್ನಾಳಿಯ ಕಿರಿಯ ನ್ಯಾಯಾಲಯದಲ್ಲಿ ಇಬ್ಬರು ನ್ಯಾಯಮೂರ್ತಿಗಳಿದ್ದು 4 ಸಾವಿರ ಪ್ರಕರಣಗಳು ಬಾಕಿ ಇದೆ. ಅದಕ್ಕಾಗಿ ಬೃಹತ್ ಅದಾಲತ್ನಲ್ಲಿ ಪ್ರಕರಣಗಳನ್ನು ಮುಕ್ತಾಯ ಮಾಡೋಣ. ಇದಕ್ಕೆ ವಕೀಲರು, ಕಕ್ಷಿದಾರರು ಹಾಗೂ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗೆರೆ ಮಾತನಾಡಿ, ಮನೆಯಲ್ಲೇ ಹಿರಿಯರ ಸಮ್ಮುಖದಲ್ಲಿ ಬಗೆ ಹರಿಸಿಕೊಳ್ಳಬಹುದಾದ ಹಲವಾರು ಕೌಟುಂಬಿಕ ಪ್ರಕರಣಗಳು ಕೇವಲ ತಪ್ಪು ಕಲ್ಪನೆಗಳಿಂದ ನ್ಯಾಯಾಲಯದ ಮೆಟ್ಟಿಲೇರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೊನ್ನಾಳಿ ಸಿವಿಲ್ ನ್ಯಾಯಾಧೀಶ ದೇವದಾಸ್, ಹೆಚ್ಚುವರಿ ನ್ಯಾಯಾಧೀಶ ಪುಣ್ಯಕೋಟಿ ಹಾಗೂ ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ. ಜಯಪ್ಪ ಮಾತನಾಡಿದರು. ಹೊನ್ನಾಳಿ ಹಾಗೂ ಹರಿಹರ ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರೀ ಮನೋಳಿ ಉಪಸ್ಥಿತರಿದ್ದರು.
ಎಪಿಪಿಗಳಾದ ಭರತ್ ಭೀಮಯ್ಯ, ಸ್ವಪ್ನ, ಸಂಘದ ಕಾರ್ಯದರ್ಶಿ ಪುರುಷೋತ್ತಮ್ ವಕೀಲ ಚಂದ್ರಪ್ಪ ಮಡಿವಾಳ, ದೊರೆಸ್ವಾಮಿ, ಉಮೇಶ್, ಎಸ್.ಎನ್. ಪ್ರಕಾಶ್, ಸುನಿಲ್ ಇತರರಿದ್ದರು.