ಜಿಲ್ಲೆ

ಬೇಡಿಕೆ ಈಡೇರಿಕೆಗೆ ಹಿರಿಯ ನಾಗರಿಕರ ಒತ್ತಾಯ

ಲಕ್ಷೆ್ಮೕಶ್ವರ: ಹೆಚ್ಚುತ್ತಿರುವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದ ಘಟನೆ/ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ತಹಸೀಲ್ದಾರರ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.

ಹಿರಿಯ ನಾಗರಿಕ ಸಂಘದ ತಾಲೂಕು ಗೌರವಾಧ್ಯಕ್ಷ ಚನ್ನಪ್ಪ ಕೋಲಕಾರ, ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಚಂಬಣ್ಣ ಬಾಳಿಕಾಯಿ ಮಾತನಾಡಿ, ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೊಷಣೆ ಮಾಡಬೇಕು. ಆರ್ಥಿಕವಾಗಿ ದುರ್ಬಲರಾದ ಎಲ್ಲಾ ಹಿರಿಯ ನಾಗರಿಕರಿಗೆ ಮಾಸಿಕ 10 ಸಾವಿರ ರೂ. ವೃದ್ಧಾಪ್ಯ ವೇತನ, ಸರ್ಕಾರಿ ಬಸ್​ಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ, ಆದಾಯ ಮಿತಿ ರೂ. 33 ಸಾವಿರದಿಂದ 1.20 ಲಕ್ಷ (ಬಿಪಿಎಲ್ ಆದಾಯ ಮಿತಿ)ರೂ.ಗಳಿಗೆ ಹೆಚ್ಚಿಸುವುದು, 7ನೇ ವೇತನ ಆಯೋಗದ ವರದಿ 2ನೇ ಭಾಗವನ್ನು ತಕ್ಷಣ ಬಿಡುಗಡೆ ಮಾಡಬೇಕು, ಜಿಲ್ಲೆಗೊಂದು ಹಿರಿಯರ ನಾಗರಿಕರ ಭವನ ನಿರ್ಮಾಣ ಹಾಗೂ ಪಟ್ಟಣದಲ್ಲಿ ಹಿರಿಯ ನಾಗರಿಕರಿಗೆ ಪಂಪ ವೃತ್ತದ ಹತ್ತಿರ ಇರುವ ಪುರಸಭೆಯ ಕಟ್ಟಡವನ್ನು ಹಿರಿಯ ನಾಗರಿಕರ ಕಾರ್ಯಾಲಯಕ್ಕೆ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ನಿಮಿತ್ತ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಕುಬೇರಪ್ಪ ಮಹಾಂತಶೆಟ್ಟರ, ಎಸ್.ಪಿ. ಪಾಟೀಲ, ಸಿ.ಎಸ್. ಕೋಟಿಮಠ, ಎಸ್.ಜಿ. ತಾಳಿಕೋಟಿಮಠ, ದ್ಯಾಮನಗೌಡ ಪಾಟೀಲ, ನೀಲಪ್ಪ ಕರ್ಜಕಣ್ಣವರ, ಚಂದ್ರಶೇಖರ ಹೂಗಾರ, ಶಕುಂತಲಾ ಅಳಗವಾಡಿ, ಈರಣ್ಣ ಮಡಿವಾಳರ, ಸುರೇಶ ರಾಚನಾಯ್ಕರ, ಗೂಳಪ್ಪ ಮೆಕ್ಕಿ, ಭರಮಪ್ಪ ಕೊಡ್ಲಿ, ಎನ್.ಎಂ. ವಡಕಣ್ಣವರ, ಇತರರಿದ್ದರು.