ಮಂಡ್ಯ: ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಮನೆಗಳಲ್ಲಿ ಕಡಿಮೆಯಾಗಿ ವೃದ್ಧಾಶ್ರಮದಲ್ಲಿ ಹೆಚ್ಚಾಗುತ್ತಿದೆ. ಇದು ದುರಾದೃಷ್ಟಕರ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಬೇಸರ ವ್ಯಕ್ತಪಡಿಸಿದರು.
ನಗರದ ಸರ್.ಎಂ.ವಿ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರು ದೇಶದ ಸ್ವತ್ತು. ಅವರನ್ನು ಜವಾಬ್ದಾರಿಯುತವಾಗಿ ರಕ್ಷಿಸಿ ಆರೋಗ್ಯ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಇತ್ತೀಚಿನ ಯುವ ಸಮೂಹ ಅದನ್ನು ಮರೆತು ಹಿರಿಯರ ಬಗ್ಗೆ ಕಾಳಜಿಯಿಲ್ಲದೇ ವಯಸ್ಸಾದ ವೃದ್ಧರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ನಿಜಕ್ಕೂ ಇದು ಬೇಸರದ ಸಂಗತಿ. ವಯಸ್ಸಾದವರನ್ನು ಯಾರು ಕೂಡ ವೃದ್ಧಾಶ್ರಮಕ್ಕೆ ಕಳುಹಿಸದೇ ತಮ್ಮ ಮನೆಯಲ್ಲೇ ಜವಾಬ್ದಾರಿಯಿಂದ ನೋಡಿಕೊಳ್ಳಿ ಎಂದು ಹೇಳಿದರು.
ಹಿರಿಯರಿಗೆ ಗೌರವ ನೀಡಿ. ಅವರ ಬೆಲೆಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಹಿರಿಯ ನಾಗರಿಕರ ದಿನವನ್ನು ಆಚರಿಸಿ ಯುವ ಸಮೂಹವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಲಾಗುತ್ತಿದೆ. ಹಿರಿಯರು ನಮ್ಮ ಜೀವನದ ಮಾರ್ಗದರ್ಶಕರು. ಡಿ.ವಿ.ಜಿ ಅವರು ಹೇಳಿರುವಂತೆ ಹಳೆಯ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಿರಿಯರು ಮನೆಯಲ್ಲಿ ಇದ್ದರೆ ಮಾತ್ರ ನಮ್ಮಂತಹ ಯುವಜನತೆಗೆ ಪ್ರೇರಣೆ. ಹಿಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬ ಇತ್ತು. ಆ ದಿನಗಳಲ್ಲಿ ಮನೆ ಅಂಗಳವೇ ಸಂತೋಷದಿಂದ ತುಂಬಿತ್ತು. ದಿನ ಕಳೆದಂತೆ ವಿಭಕ್ತ ಕುಟುಂಬಗಳಾಗುತ್ತ, ಅವಿಭಕ್ತ ಕುಟುಂಬದ ಗಂಧಗಾಳಿಯೇ ಇಲ್ಲದಂತೆ ಆಗಿದೆ. ಪ್ರತಿಯೊಬ್ಬರೂ ಅವಿಭಕ್ತ ಕುಟುಂಬಕ್ಕೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ-1 ತಿಮ್ಮಯ್ಯ, ಜ್ಞಾನಸಿಂಧು ವೃದ್ದಾಶ್ರಮದ ಕಾರ್ಯದರ್ಶಿ ವಿಜಯ್‌ಕುಮಾರ್, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಶಿವಲಿಂಗಯ್ಯ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಹುಚ್ಚಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ ಇತರರಿದ್ದರು.