ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ನಗರೀಕರಣ, ಪತಿ-ಪತ್ನಿ ಉದ್ಯೋಗ, ಸಂಕುಚಿತ ಮನೋಭಾವ, ವಿಭಕ್ತ ಕುಟುಂಬ ಹೀಗೆ ಅನೇಕ ಕಾರಣಗಳಿಂದ ಮಕ್ಕಳಿಂದ ಪರಿತಕ್ತರಾದ ತಂದೆ-ತಾಯಿಯರು ವೃದ್ಧಾಶ್ರಮದ ಆಸರೆಗೆ ಬರುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದು ದುರಂತ. ಗ್ರಾಮಾಂತರ ಜಿಲ್ಲೆಯೊಂದರಲ್ಲೇ ಕಳೆದ ನಾಲ್ಕು ವರ್ಷದಲ್ಲಿ ಶೇ.25 ರಷ್ಟು ವೃದ್ಧಾಶ್ರಮಗಳು ಜನ್ಮತಾಳಿವೆ. ಪರಿಸ್ಥಿತಿಯ ಲಾಭ ಪಡೆಯಲೆಂದೇ ಕೆಲವೊಂದು ಕಮರ್ಷಿಯಲ್ ವೃದ್ಧಾಶ್ರಮಗಳು ತಲೆ ಎತ್ತುತ್ತಿರುವ ಅಪಾಯವೂ ಕಂಡುಬರುತ್ತಿದೆ. ಇವುಗಳ ನಡುವೆ ಸೇವಾ ಮನೋಭಾವನೆಯ ವೃದ್ಧಾಶ್ರಮಗಳೂ ಕಾರ್ಯನಿರ್ವಹಿಸುತ್ತಿರುವುದು ಹಿರಿಯ ಜೀವಗಳಿಗೆ ತುಸು ನೆಮ್ಮದಿ ಎನಿಸಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಮೂರು ಸರ್ಕಾರಿ ವೃದ್ಧಾಶ್ರಮ:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಮೂರು ವೃದ್ಧಾಶ್ರಮಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ, ವಿಜಯಪುರದಲ್ಲಿ ಬಾಪೂಜಿ ವೃದ್ಧಾಶ್ರಮ, ವನಕಲ್ಲು ಮಠದಲ್ಲಿನ ವೃದ್ಧಾಶ್ರಮ ಹಾಗೂ ಕನ್ನಮಂಗಲದಲ್ಲಿನ ವೃದ್ಧಾಶ್ರಮಗಳಿದ್ದು ಇವುಗಳಲ್ಲಿ ದಾಖಲಾಗುತ್ತಿರುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಉಳಿದಂತೆ ಖಾಸಗಿಯಾಗಿ ನೂರಾರು ವೃದ್ಧಾಶ್ರಮಗಳು ಹುಟ್ಟಿಕೊಂಡಿದ್ದು, ವಯಸ್ಸಾಗುತ್ತಿದ್ದಂತೆ ಹುಟ್ಟಿ ಬೆಳೆದ ಮನೆ, ತಾವೇ ಸಾಕಿ ಬೆಳೆಸಿದ ಮಕ್ಕಳಿಂದ ದೂರವಾಗಿ ಅಕ್ಷರಶಃ ಅನಾಥರಾಗುತ್ತಿರುವ ಪಾಲಕರು ವೃದ್ಧಾಶ್ರಮದ ಪಾಲಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಹಿರಿಯರಿಗೆ ಸಂಗಮ:
ಹಿರಿಯ ನಾಗರಿಕರ ರಕ್ಷಣೆ, ಪಾಲನೆಗಾಗಿಯೇ ಗ್ರಾಮಾಂತರ ಜಿಲ್ಲೆಯ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಹಲವು ಯೋಜನೆಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಕಳೆದೆರಡು ವರ್ಷದಿಂದ ಅನುಷ್ಟಾನಗೊಂಡ ’ಸಂಗಮ’ ಹೆಸರಿನ ಯೋಜನೆಯಿಂದ ಹಿರಿಯ ಜೀವಗಳಿಗೆ ತುಸು ಜೀವಕಳೆ ತರುವ ಪ್ರಯತ್ನ ನಡೆದಿದೆ. ಹಿರಿಯರಿಗೆ ಊರುಗೋಲು ಯೋಜನೆ, ಪ್ರತಿ ಶುಕ್ರವಾರ ವೃದ್ಧಾಶ್ರಮಗಳಲ್ಲಿನ ಹಿರಿಯರಿಗೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚಿಗೆ ಆರಂಭವಾದ ‘ದೀರ್ಘಾಯು’ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ ಉಗುರು ಹಾಗೂ ತಲೆ ಗೂದಲು ಕತ್ತರಿಸುವುದು, ಆರೋಗ್ಯ ಶಿಬಿರ ಮತ್ತಿತರ ಕಾರ್ಯಕ್ರಮಗಳು ಮೆಚ್ಚುಗೆ ಪಡೆದಿವೆ.
ಬೀದಿ ಪಾಲಾಗುತ್ತಿರುವವರೂ ಹೆಚ್ಚು:
ವೃದ್ಧಾಶ್ರಮಗಳಿಗೆ ಪಾಲಕರನ್ನು ಕರೆತರುತ್ತಿರುವವ ಸಂಖ್ಯೆ ಒಂದೆಡೆಯಾದರೆ, ಬೀದಿ ಪಾಲಾಗುತ್ತಿರುವವ ಸಂಖ್ಯೆಯೂ ದೊಡ್ಡದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಸರ್ಕಾರಿ ಶಾಲೆಗಳ ಆವರಣ ಸೇರಿ ಸಿಕ್ಕ ಸಿಕ್ಕ ಜಾಗಗಳಲ್ಲೇ ರಾತ್ರಿ ಕಳೆದು ಬೆಳಗ್ಗಿನ ವೇಳೆ ಭಿಕ್ಷಾಟನೆ ಮಾಡುವವ ಪರಿಸ್ಥಿತಿ ಕಂಡುಬರುತ್ತಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ 30 ಕ್ಕೂ ಹೆಚ್ಚು ಇಂಥ ಪರಿಸ್ಥಿತಿಯಲ್ಲಿರುವವರನ್ನು ರಕ್ಷಣೆ ಮಾಡಿರುವ ಇಲಾಖೆ ಚಿಕಿತ್ಸೆ ಕೊಡಿಸಿ ವೃದ್ಧಾಶ್ರಮಗಳ ಆಸರೆ ಕೊಡಿಸಿದ್ದಾರೆ. ಇದರಲ್ಲಿ ಬಹುತೇಕರು ಮಾನಸಿಕ ಸ್ಥಿಮೀತ ಕಳೆದುಕೊಂಡಿದ್ದಾರೆ ಎಂಬುದು ದುರಂತ.
ಪಾಲಕರೇ ಸ್ವಯಂ ಸೇರ್ಪಡೆ: ವಯಸ್ಸಾದ ನಂತರ ಮಕ್ಕಳ ಪಾಳಿಗೆ ‘ಭಾರ’ ಎನಿಸುವ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸಲಾಗುತ್ತಿದ ಮತ್ತೊಂದಡೆ ಮಕ್ಕಳಿಗೆ ನಾವೇ ‘ಭಾರ’ವಾಗಬಾರದೆಂಬ ಕಾರಣಕ್ಕೆ, ಮನೆಯಲ್ಲಿನ ಪರಿಸ್ಥಿತಿ ಮನಗಂಡು ಹಲವು ವೃದ್ಧರು ಸ್ವತಹ ತಾವೇ ವೃದ್ಧಾಶ್ರಮಗಳಿಗೆ ಬಂದು ಸೇರಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚಿಗೆ ಸಾಮಾನ್ಯವಾಗಿವೆ ಎಂಬುದು ಇಲಾಖೆಯ ಅಂಕಿ ಅಂಶಗಳಲ್ಲಿ ತಿಳಿದುಬರುತ್ತಿದೆ.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಿವೆ, ಇದಕ್ಕೆ ನಗರೀಕರಣ, ಹಿರಿಯರ ಬಗ್ಗೆ ಕಡೆಗಣನೆ, ವಿಭಕ್ತ ಕುಟುಂಬ ಸೇರಿ ಅನೇಕ ಕಾರಣಗಳಿವೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಕಡಿಮೆಯಾಗುತ್ತಿರುವುದು ಕಾರಣವಾಗಿದೆ ಎನ್ನಬಹುದು. ಹಿರಿಯ ನಾಗರಿಕರಿಗಾಗಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಪ್ರಾಮಾಣಿಕವಾಗಿ ಅವರ ಸೇವೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಂಗಮ ಹೆಸರಿನ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಹಿರಿಯರಿಗಾಗಿಯೇ ರೂಪಿಸಲಾಗಿದೆ.
ಜಗದೀಶ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ, ಬೆಂ.ಗ್ರಾಮಾಂತರ
ಅ.1ರಂದು ಹಿರಿಯ ನಾಗರಿಕರ ದಿನಾಚರಣೆ ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅ.1ರಂದು 10.30ಕ್ಕೆ ದೇವನಹಳ್ಳಿಯ ಜಿಲ್ಲಾಡಳಿತಭವನ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜತೆಗೆ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನಾ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.