ಬೆಂಗಳೂರು : ಹಿರಿಯ ರಂಗಕರ್ಮಿ ಲೋಕನಾಥ ದೀಕ್ಷಿತ್ ಅವರು ಹುಟ್ಟುಹಾಕಿರುವ ರಂಗಸಂಸ್ಕೃತಿ ಸಂಸ್ಥೆಯು ಪ್ರತಿವರ್ಷ ತನ್ನ ವಾರ್ಷಿಕೋತ್ಸವದ ಸವಿನೆನಪಿಗೆ ರಂಗಕರ್ಮಿಗಳಿಗೆ ಕೊಡಮಾಡುವ ‘ರಂಗಸಂಸ್ಕೃತಿ ಸಿರಿ’ 2024ನೇ ಸಾಲಿನ ಪ್ರಶಸ್ತಿಗೆ ಹಿರಿಯ ನಟಿ ಕಲ್ಯಾಣಿ ಪ್ರದೀಪ್ ಅವರು ಆಯ್ಕೆಯಾಗಿದ್ದಾರೆ. ಮೇ 12ರಂದು ಗವಿಪುರಂ ಗುಟ್ಟಳ್ಳಿಯಲ್ಲಿರುವ ಉದಯಬಾನು ಕಲಾ ಸಂಘದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿಪತ್ರ, ಶಾಲು, ಹಾರ, ಲ ತಾಂಬೂಲವನ್ನು ಒಳಗೊಂಡಿದ್ದು, ಸುದೀರ್ಘ 5 ದಶಕಗಳ ರಂಗಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ರಂಗಸಂಸ್ಕೃತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಲೋಕೇಶ್ ತಿಳಿಸಿದ್ದಾರೆ.
ಮೇ 12ರಂದು ಸಂತೆ 5 ಗಂಟೆಗೆ ನಡೆಯಲಿರುವ ತಂಡದ 8ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲೋಕನಾಥ ದೀಕ್ಷಿತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಲೋಕನಾಥ ದೀಕ್ಷಿತ್ ಅವರ ರಚಿಸಿರುವ 'ಭಾಗವತರ ನಾಟಕ ಮಂಡಳಿ' ಎಂಬ ಹಾಸ್ಯಪ್ರದಾನ ನಾಟಕ ಪ್ರದರ್ಶನ ನಡೆಯಲಿದೆ. ಹಿರಿಯ ರಂಗಕರ್ಮಿ ಕೆ.ಜಿ.ಸಂಪತ್ ಕುಮಾರ್ ನಿರ್ದೇಶಿಸಿರುವ ನಾಟಕಕ್ಕೆ ಜೆ.ಸೋಮಶೇಖರ್ ಪ್ರಸಾಧನ ಮಾಡಿದ್ದಾರೆ. ರಂಗಸಂಸ್ಕೃತಿ ತಂಡದ ಕಲಾವಿದರು ವಿವಿಧ ಪಾತ್ರಗಳಲ್ಲಿ ನಟಿಸಲಿದ್ದಾರೆ.