ಜಿಲ್ಲೆ

ಕೊಡಸಳ್ಳಿಯಿಂದ ನೀರು ತರಲು ಪ್ರಸ್ತಾವನೆ ಸಲ್ಲಿಸಿ

ಕಾರವಾರ:ಕೊಡಸಳ್ಳಿ ಅಣೆಕಟ್ಟೆಯಿಂದ ಕಾರವಾರದ ಗ್ರಾಮಗಳಿಗೆ ನೀರು ತರಲು ಪ್ರಸ್ತಾವನೆ ಸಲ್ಲಿಸಿ ಎಂದು ಶಾಸಕ ಸತೀಶ ಸೈಲ್ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಾಳಿ ನದಿಯ ಎಡ ಹಾಗೂ ಬಲ ದಂಡೆಯ ಗ್ರಾಮಗಳಿಗೆ ಕದ್ರಾ ಅಣೆಕಟ್ಟೆಯ ಹಿನ್ನೀರಿನಿಂದ ನೀರು ತರಲು ಜಲಜೀವನ ಮಿಷನ್ ಯೋಜನೆಯಡಿ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ. ಆದರೆ, ಕದ್ರಾ ಅಣೆಕಟ್ಟೆಯ ನೀರಿನ ಗುಣಮಟ್ಟದ ಬಗ್ಗೆ ಸ್ಥಳೀಯ ಕೆಲವು ಗ್ರಾಮಗಳಲ್ಲಿ ಅನುಮಾನ ಆತಂಕಗಳಿವೆ. ಈಗಾಗಲೇ ಮಂಜೂರಾದ ಯೋಜನೆ ನಡೆಯಲಿ. ಹೆಚ್ಚುವರಿಯಾಗಿ ಪೈಪ್‌ಲೈನ್ ಅಳವಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು.
ಭಾಗಶಃ ಬರಗಾಲ ಪೀಡಿತ ಎಂದು ಘೋಷಣೆಯಾದ ತಾಲೂಕಿನಲ್ಲಿ ಶೇ. 50 ರಷ್ಟು ಇಳುವರಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ರೈತರಿಗೆ ಭತ್ತಕ್ಕೆ ಪ್ರತಿ ಎಕರೆಗೆ 3400 ರೂ. ಪರಿಹಾರ ದೊರೆಯಬಹುದು ಎಂದು ಕೃಷಿ ಅಽಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಮೀಕ್ಷೆಯಲ್ಲಿ ಯಾವುದೇ ಒಬ್ಬ ರೈತನ ಹೆಸರೂ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ ಎಂದರು.
ಗೃಹ ಜ್ಯೋತಿ ಯೋಜನೆಯಡಿ ಶೇ. 80 ರಷ್ಟು ಜನ ನೋಂದಣಿ ಮಾಡಿ ಪ್ರಯೋಜನ ಪಡೆಯುತ್ತಿದ್ದು, ಶೇ.100 ರಷ್ಟು ಜನರು ಪ್ರಯೋಜನ ಪಡೆಯುವಂತಾಗಬೇಕು. ಪ್ರತಿ ಮನೆಗಳ ಸಮೀಕ್ಷೆಗೆ ಕ್ರಮ ವಹಿಸಿ. ವಿದ್ಯುತ್ ಇಲ್ಲದ ಮನೆಗಳನ್ನು ಗುರುತಿಸಿ ವಿದ್ಯುತ್ ನೀಡಲು ಕ್ರಮ ವಹಿಸಿ ಎಂದು ಹೆಸ್ಕಾಂ ಅಽಕಾರಿಗಳಿಗೆ ಸೂಚನೆ ನೀಡಿದರು.

ಅರಣ್ಯಾಧಿಕಾರಿಗಳ ಮನೆ ಕರೆಂಟ್ ಕಟ್ ಮಾಡಿ


ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ 7 ಕಾಲು ಸಂಕ ಕಾಮಗಾರಿಗಳು ಅರಣ್ಯದ ಕಾರಣಕ್ಕೆ ನಿಂತು ಹೋಗಿವೆ ಎಂದು ಪಿಡಬ್ಲುಡಿ ಎಇಇ ರಾಮು ಅರ್ಗೇಕರ್ ತಿಳಿಸಿದರು. ಜನರಿಗೆ ಸೇತುವೆ, ರಸ್ತೆ, ವಿದ್ಯುತ್ ಸಂಪರ್ಕ ನೀಡಲು ಅರಣ್ಯಾಧಿಕಾರಿಗಳು ಯಾವುದೇ ಕಾರಣಕ್ಕೂ ಅಡ್ಡಿ ಮಾಡಬಾರದು ಎಂದು ಸೂಚಿಸಿದ ಶಾಸಕ ಸತೀಶ ಸೈಲ್ ಹಾಗೇನಾದರೂ ಅಡ್ಡಿ ಮಾಡಿದರೆ ಮೊದಲು ಅರಣ್ಯಾಧಿಕಾರಿ ಕ್ವಾಟ್ರಸ್‌ನ ವಿದ್ಯುತ್ ಕಡಿತ ಮಾಡಿ ಎನ್ನುತ್ತ ಹಾಸ್ಯ ಚಟಾಕಿ ಹಾರಿಸಿದರು.

ಒಂದೇ ಕಾಮಗಾರಿಗೆ ಎರಡು ಟೆಂಡರ್!


ಕಾರವಾರ-ಹಬ್ಬುವಾಡ ರಸ್ತೆ ಕಾಮಗಾರಿಗೆ ಪಿಡಬ್ಲುಡಿ ಹಾಗೂ ನಗರಸಭೆ ಎರಡೂ ಇಲಾಖೆಗಳು ಟೆಂಡರ್ ಕರೆದಿವೆ. ಇದು ಸರಿಯಾದ ಕ್ರಮವಲ್ಲ. ಸದ್ಯ ಪಿಡಬ್ಲುಡಿ ಕೆಲಸ ಮಾಡಿದೆ. ಕಾಮಗಾರಿ ನಡೆಸದೇ ಹಣ ಲಪಟಾಯಿಸುವ ಯೋಜನೆ ರೂಪಿಸಲಾಗಿತ್ತೇ ಎಂಬ ಅನುಮಾನ ಮೂಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು ಎಂದು ಶಾಸಕ ಸೈಲ್ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಮಚ್ಚಳ್ಳಿ ಸೇತುವೆ ಕಾಮಗಾರಿಗೂ ಪಿಡಬ್ಲುಡಿ ಹಾಗೂ ಪಿಎಂಜಿಎಸ್‌ವೈ ಎರಡೂ ಇಲಾಖೆಗಳು ಟೆಂಡರ್ ಕರೆದಿದ್ದವು. ಇಂಥ ತಪ್ಪು ಇನ್ನು ಆಗದಂತೆ ಎಲ್ಲ ಇಲಾಖೆಗಳು ಎಚ್ಚರ ವಹಿಸಬೇಕು ಎಂದು ಶಾಸಕ ಸೈಲ್ ಎಚ್ಚರಿಸಿದರು.