ಶ್ರೀರಂಗಪಟ್ಟಣ : ತಾಲೂಕಿನಲ್ಲಿ ಗುಣಮಟ್ಟದ ಫಲಿತಾಂಶಗಳಿಸುವಲ್ಲಿ ಶಿಕ್ಷಕರ ಸಾಧನೆ ಮತ್ತು ಸಹಕಾರ ದೊಡ್ಡದು ಎಂದು ನಿರ್ಗಮಿತ ಬಿಇಒ ಎಂ.ಆರ್.ಅನಂತರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ನೂತನ ಬಿಇಒ ಮಹೇಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕಳೆದ 3 ವರ್ಷಗಳ ಕಾಲ ನಾನು ಸಲ್ಲಿಸಿದ ಸೇವೆ ಅವಧಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಪ್ರಗತಿಗೆ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿ ಪೂರಕವಾಗಿ ಸಹಕರಿಸಿದ್ದಾರೆ. ಅವರ ಬೆಂಬಲ ನನಗೆ ಶಕ್ತಿ ನೀಡಿತ್ತು ಎಂದರು.
ಪರಿವರ್ತನೆಗೊಳ್ಳಿ:ಶಿಕ್ಷಕರು ಗುರುವಾಗಿ ಪರಿವರ್ತನೆಗೊಳ್ಳಬೇಕು. ಪ್ರತಿ ವಿದ್ಯಾರ್ಥಿಗಳಿಂದ ಪ್ರತಿದಿನವೂ ಪ್ರತಿಯೊಂದು ಪಾಠಗಳನ್ನು ನಾವು ಕಲಿಯಬೇಕು. ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದಲ್ಲಿ ತಮ್ಮ ಸೇವಾವಧಿಯಲ್ಲಿ ಯಾವುದೇ ಲೋಪ ಹಾಗೂ ಕಳಂಕ ಉಂಟಾಗದಂತೆ ಶಾಲಾ ಅಭಿವೃದ್ಧಿ ಕಾರ್ಯಗಳು ನೆರವಾಗಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಶ್ಯಕ ಕ್ರಮಗಳು ಹಾಗೂ ಪರೀಕ್ಷಾ ಸಮಯಗಳಲ್ಲಿ ಸರ್ಕಾರದ ಯಾವುದೇ ಆದೇಶಗಳಿಗೆ ಕೈಗೊಂಡ ಸಿದ್ಧತೆ ಮಾದರಿಯಾಗಿತ್ತು ಎಂದರು.ಕ್ಷೇತ್ರದ ನಮ್ಮ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಯಂ ಪ್ರೇರಣೆಯಿಂದ ಉತ್ತೇಜಿಸಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಾದರಿ ಫಲಿತಾಂಶಗಳಿಸಲು ಕಾರಣರಾಗಿದ್ದಾರೆ. ಇದು ನನಗೆ ಮರೆಯಲಾರದ ಅನುಭವ ನೀಡಿದೆ. ಮುಂದೆಯೂ ಇದೇ ರೀತಿ ಸಾಧನೆಗೆ ತಾಲೂಕು ಸಾಕ್ಷಿಯಾಗಲಿ ಎಂದು ಅವರು ಹಾರೈಸಿದರು.
ಬಿಇಒ ಆರ್.ಪಿ.ಮಹೇಶ್ ಮಾತನಾಡಿ, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಮಯಪ್ರಜ್ಞೆಯೊಂದಿಗೆ ಇಲಾಖೆ ನೀತಿ ನಿಯಮಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆ ಬಾರದು ಎಂದರು. ವಿದ್ಯಾರ್ಥಿಗಳ ಯಶಸ್ಸೇ ನಮಗೆ ಶ್ರೇಯಸ್ಸು ಎಂಬುದನ್ನು ಮರೆಯುಬಾರದು ಎಂದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪ್ರಭಾ, ಶಿಕ್ಷಣ ಸಂಯೋಜಕಿ ಡಾ.ಬಿ.ಕೆ.ಪ್ರತಿಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ಸಿ.ಚಂದ್ರು, ಶಿಕ್ಷಕರಾದ ರಾಜಶೇಖರ್, ಮಂಜುನಾಥ್, ರಮೇಶ್, ರವಿಕುಮಾರಸ್ವಾಮಿ, ರವಿಕುಮಾರ್, ಡಿ.ರಮೇಶ್ ಸೇರಿದಂತೆ ಇತರರು ಇದ್ದರು.