ಜಿಲ್ಲೆ

ಯಾದಾಪುರದಲ್ಲಿ ಶಿಕ್ಷಕರಿಗೆ ಬೀಳ್ಕೊಡುಗೆ

ಎ. ಆರ್. ರಘುರಾಮ

ಅರಸೀಕೆರೆ : ಪ್ರಾಮಾಣಿಕತೆ, ಶಿಸ್ತು ಮತ್ತು ಸಮಯಪ್ರಜ್ಞೆ ಅಳವಡಿಸಿಕೊಂಡ ವಿದ್ಯಾರ್ಥಿಗಳಿಗೆ ಸಾಧನೆ ಸುಲಭವಾಗುತ್ತದೆ ಎಂದು ಜೇನುಕಲ್ ಸಿದ್ದೇಶ್ವರ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಚನ್ನಬಸವಯ್ಯ ಹೇಳಿದರು.
ಯಾದಾಪುರ ಗ್ರಾಮದ ಜೇನುಕಲ್ ಸಿದ್ದೇಶ್ವರ ಪ್ರೌಢಶಾಲೆ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೇಮಯ್ಯ ಚಾವಡಿ ಅವರಿಗೆ ಸೋಮವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕ ಹೇಮಯ್ಯ ಚಾವಡಿ ಮಾತನಾಡಿ, ನಿವೃತ್ತಿಯ ದಿನ ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದ್ದು ಅವಿಸ್ಮರಣೀಯ ಎಂದರು.ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಂ.ಮಲ್ಲಯ್ಯ, ದ್ಯಾವಯ್ಯ, ಅಶೋಕ್ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರು ಹಾಗೂ ಪ್ರಸಕ್ತ ಶಿಕ್ಷಕರಿಗೆ ವಿದ್ಯಾರ್ಥಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಯಾದಾಪುರ ವೀರಭದ್ರಪ್ಪ, ಮಲ್ಲೇಶಪ್ಪ, ಶಿಕ್ಷಕರಾದ ರೇಣುಕಪ್ಪ, ಯು.ಎಸ್.ಕೃಷ್ಣಮೂರ್ತಿ, ಬಿ.ಎನ್.ಚಂದ್ರಶೇಖರ್, ರಾಜಪ್ಪ, ಗೋಪಾಲ್, ಬಸವರಾಜ್ ಇದ್ದರು.