ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಬೈಂದೂರು ತಾಲೂಕಿನಿಂದ ಬೇರ್ಪಟ್ಟ ಸೇನಾಪುರ ಗ್ರಾಮಸ್ಥರು ಇತ್ತ ನಾಡಾ ಗ್ರಾಮ ಪಂಚಾಯಿತಿಗೂ ಸೇರಲಾಗದೆ ಮತ್ತೊಂದೆಡೆ ಹಕ್ಲಾಡಿ ಗ್ರಾಮ ಪಂಚಾಯಿತಿಗೂ ಸೇರಲು ಮನಸ್ಸಿಲ್ಲದೆ ಅಕ್ಷರಶಃ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಸೇನಾಪುರ ಹಿಂದೆ ನಾಡಾ ಗ್ರಾಪಂಗೆ ಸೇರಿದ್ದು, ಬೈಂದೂರು ತಾಲೂಕಿಗೆ ಸೇರಿದರೆ ತಾಲೂಕು ಕಚೇರಿ ಇನ್ನಿತರ ಕೆಲಸಗಳಿಗೆ ಹೋಗಿ ಬರುವುದಕ್ಕೆ ಸಮಸ್ಯೆಯಾಗುತ್ತದೆ ಎಂಬ ಕಾರಣ ನೀಡಿ ನಮ್ಮನ್ನು ಕುಂದಾಪುರ ತಾಲೂಕಿನಲ್ಲೇ ಉಳಿಸುವಂತೆ ಗ್ರಾಮಸ್ಥರು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಕೊನೆಗೆ ಸೇನಾಪುರವನ್ನು ಕುಂದಾಪುರ ತಾಲೂಕಲ್ಲಿ ಉಳಿಸಿ ಮತದಾನದ ಹಕ್ಕು ಬೈಂದೂರು ಕ್ಷೇತ್ರಕ್ಕೆ ನೀಡಲಾಯಿತು. ಬೈಂದೂರು ತಾಲೂಕು ಆದ ಬಳಿಕ ಸೇನಾಪುರ ಸ್ವತಂತ್ರವಾಗಿತ್ತು. ಪ್ರಸಕ್ತ ಸೇನಾಪುರವನ್ನು ಹೊಸಾಡು ಗ್ರಾಮಕ್ಕೆ ಸೇರಿಸಲಾಗುತ್ತದೆ ಎನ್ನುವ ಸುದ್ದಿ ಗ್ರಾಮಸ್ಥರ ನೆಮ್ಮದಿ ಕಸಿದಿದೆ. ಸೇನಾಪುರ ಸ್ವತಂತ್ರ ಗ್ರಾಮವಾಗಬೇಕು ಇಲ್ಲದಿದ್ದರೆ ನಾಡಾ ಗ್ರಾಮದಲ್ಲೇ ನಮ್ಮನ್ನು ಉಳಿಸಬೇಕು. ಹೊಸಾಡು ಅಥವಾ ಹಕ್ಲಾಡಿ ಗ್ರಾಪಂಗೆ ಸೇರಿಸಿದರೆ ಹೋರಾಟ ಅನಿವಾರ್ಯ ಎಂದು ನಾಗರಿಕರು ಎಚ್ಚರಿಸಿದ್ದಾರೆ.
ಹೊಸಾಡು ಗ್ರಾಪಂಗೆ ಸೇನಾಪುರ ಸೇರಿಸದಂತೆ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರಲ್ಲಿ ಮನವಿ ಮಾಡಲಾಗಿದೆ. ಸೇನಾಪುರ ಸ್ವತಂತ್ರ ಗ್ರಾಮವಾಗುವ ಎಲ್ಲ ಅರ್ಹತೆಯಿದೆ. ಹೊಸಾಡು ಗ್ರಾಮಕ್ಕೆ ಸೇನಾಪುರ ಸೇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ಅರಾಟೆ ಚಂದ್ರಶೇಖರ ಪೂಜಾರಿ, ಅಧ್ಯಕ್ಷ ಹೊಸಾಡು ಗ್ರಾಪಂ ಬೈಂದೂರು ತಾಲೂಕಿಗೆ ಸೇನಾಪುರ ಸೇರ್ಪಡೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲೇ ಮುಂದಾಗುವ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೆ ಯಾರೂ ಮುಂದಾಲೋಚನೆಯಿಲ್ಲದೆ ಹೋರಾಟ ಮಾಡಿದ್ದರ ಪ್ರತಿಫಲ ಸೇನಾಪುರ ಹೊಸಾಡು ಗ್ರಾಮಕ್ಕೆ ಸೇರುವ ಹಂತಕ್ಕೆ ಬಂದಿದೆ. ಗೋಪಾಲಕೃಷ್ಣ, ಸಾಮಾಜಿಕ ಕಾರ‌್ಯಕರ್ತ ರಾಮನಗರ ಸೇನಾಪುರ ಸೇನಾಪುರವನ್ನು ಸ್ವತಂತ್ರ ಗ್ರಾಮವನ್ನಾಗಿ ಮಾಡುವಂತೆ ಸ್ಥಳೀಯರು ಬೇಡಿಕೆಯಿಟ್ಟಿದ್ದು, ಗ್ರಾಮೀಣ ಇಲಾಖೆ ಸಚಿವರು ಹಾಗೂ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ 60 ಹೊಸ ಗ್ರಾಮಗಳ ಬೇಡಿಕೆಯಿದ್ದು, ಈ ಸಂದರ್ಭ ಸೇನಾಪುರವನ್ನು ಸ್ವತಂತ್ರ ಗ್ರಾಮವನ್ನಾಗಿ ಮಾಡುವ ಭರವಸೆ ಲಿಖಿತವಾಗಿ ಕೊಟ್ಟಿದ್ದಾರೆ. ಬಿ.ಎಂ.ಸುಕುಮಾರ ಶೆಟ್ಟಿ ಶಾಸಕ ಬೈಂದೂರು