ಜಿಲ್ಲೆ

ಸೇವೆ ಸಲ್ಲಿಸಲು ಸಹಕಾರ ಕ್ಷೇತ್ರ ಉತ್ತಮ: ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ಅಭಿಮತ

ಮಂಡ್ಯ: ಚುನಾಯಿತ ಪ್ರತಿನಿಧಿಗಳಿಗೆ ಸಾಮಾಜಿಕ ಸೇವೆ ಸಲ್ಲಿಸಲು ಸಹಕಾರ ಕ್ಷೇತ್ರ ಉತ್ತಮವಾಗಿದೆ ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ತಿಳಿಸಿದರು.

ತಾಲೂಕಿನ ಮಂಗಲ ಗ್ರಾಮದ ಕೃಷಿ ಪತ್ತಿನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷದ ಅಂಗವಾಗಿ ನಬಾರ್ಡ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಸಾವಯವ ಕೃಷಿಯ ಮಹತ್ವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಹಭಾಗಿತ್ವದಲ್ಲಿ ಕೃಷಿ, ಅಭಿವೃದ್ಧಿ, ಶಿಕ್ಷಣ ಹೀಗೆ ಹಲವಾರು ವಿಷಯಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಬಹುದಾಗಿದೆ. ಭಾರತ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿ ಸಹಕಾರ ಕ್ಷೇತ್ರಕ್ಕೆ ವಿಶೇಷವಾದ ಆಸಕ್ತಿಯನ್ನು ತಳೆದಿದೆ. ದೇಶದ ಪ್ರತಿ ಪ್ರಜೆಯೂ ಸಹಕಾರಿ ಕ್ಷೇತ್ರದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥೈಸಿಕೊಂಡು ಗ್ರಾಮದ ಅಭ್ಯುದಯಕ್ಕಾಗಿ ಸಹಕಾರ ಕ್ಷೇತ್ರಗಳ ಬಲವರ್ಧನೆಗಾಗಿ ಪೂರಕ ಯೋಜನೆಗಳನ್ನು ಪ್ರಸಕ್ತ ಚುನಾಯಿತ ಸಹಕಾರಿಗಳು ಅಳವಡಿಸಿಕೊಳ್ಳಬೇಕಿದೆ. ನಬಾರ್ಡ್ ನೇರವಾಗಿ ಜನರಿಗೆ ಸಹಾಯವನ್ನು ಮಾಡದಿದ್ದರೂ, ಸರ್ಕಾರ ಮತ್ತು ಸಹಕಾರ ಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆ ಮೂಲಕ ಸೇವೆ ಸಲ್ಲಿಸುತ್ತಿದೆ. ದೇಶದ ಶೇ. 60ರಷ್ಟು ಜನರು ಸಹಕಾರಿ ಕ್ಷೇತ್ರದ ಭಾಗೀದಾರರಾಗಬೇಕಿದೆ ಎಂದರು.

ಅಂತಾರಾಷ್ಟ್ರೀಯ ಸಹಕಾರ ವರ್ಷದ ಭಿತ್ತಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಕೃಷಿಯಲ್ಲಿ ಮೂಲವರ್ಧನೆ ಹೆಚ್ಚಾಗಬೇಕಿದೆ. ಸಹಕಾರ ಕ್ಷೇತ್ರದಲ್ಲಿ ನ್ಯಾಯಬೆಲೆ ಅಂಗಡಿ, ರಾಸಾನಿಯಕ ಗೊಬ್ಬರಗಳ ಮಾರಾಟ ಮತ್ತು ಈ ರೀತಿಯ ಗ್ರಾಹಕ ಮತ್ತು ರೈತನಿಗೆ ಉಪಯೋಗುವ ಸಹಕಾರಿ ಸಂಸ್ಥೆಗಳಾಗಿ ಕೆಲಸ ಮಾಡಿವೆ. ಸ್ವಾತಂತ್ರ್ಯ ಬಂದು 75 ವರ್ಷದ ನಂತರ ಸಹಕಾರಿ ಕ್ಷೇತ್ರದ ಹಲವು ಕವಲು ಒಡೆದಿದ್ದು, ಅವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಸಹಕಾರ ಕ್ಷೇತ್ರ ಮತ್ತು ಕಂಪನಿ ಕಾಯ್ದೆಗಳನ್ನು ರೈತರು ಗುಂಪುಗಳಾಗಿ ನೋಂದಾವಣೆಗೊಂಡು ಹೊಸ ಹೊಸ ಅನ್ವೇಷಣೆಗಳ ಮೂಲಕ ಕೃಷಿಯನ್ನು ಉದ್ಯಮವನ್ನಾಗಿಸಬೇಕು. ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎಂಬ ಕೀಳರಿಮೆ ರೈತರಲ್ಲಿದೆ. ವಿವಿಧ ಹಂತಗಳಲ್ಲಿ ಕೃಷಿ ಲಾಭದತ್ತ ಸಾಗುತ್ತಿದೆ. ಸಾವಯವ ಉತ್ಪನ್ನಗಳಲ್ಲಿ ಕಲಬೆರಕೆಯನ್ನು ತಡೆಯುವ ನಿಟ್ಟಿನಲ್ಲಿ ಹಲವು ಗುಂಪುಗಳನ್ನು, ತಜ್ಞರುಗಳನ್ನು ಸರ್ಕಾರ ನೇಮಕ ಮಾಡಿದೆ. ಗುಣಮಟ್ಟ ಪರೀಕ್ಷಿಸಲು ಸಾವಯವ ಕೃಷಿ ಪದ್ಧತಿಯು ಭವಿಷ್ಯದ ಮನುಕುಲ ಸಂರಕ್ಷಣೆಗೆ ಮಹತ್ವದ್ದಾಗಿದೆ ಎಂದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ವಿಶ್ವ ಸಂಸ್ಥೆಯು 2025ರ ವರ್ಷವನ್ನು ವಿಶ್ವ ಸಹಕಾರ ವರ್ಷ ಎಂದು ಘೋಷಣೆ ಮಾಡಿರುವುದು ಸಮಯೋಚಿತವಾಗಿದೆ. ಸಹಕಾರ ಕ್ಷೇತ್ರದಲ್ಲಿ ನಾಯಕತ್ವ ಬೆಳವಣಿಗೆ, ಸಾಮಾಜಿಕ ಜವಾಬ್ದಾರಿ ಹಂಚಿಕೆ ಹೆಚ್ಚಳವಾಗಿದೆ. ಗ್ರಾಮಗಳಲ್ಲಿ ಆದಾಯೋತ್ಪನ್ನ ಚಟುವಟಿಕೆಗಳಿಗೆ ಪೂರಕವಾಗುವ ಹಾಲು ಉತ್ಪಾದಕ. ಪ್ರಾಥಮಿಕ ಕೃಷಿ ಪತ್ತಿನ, ನೀರು ಬಳಕೆದಾರರ ಸಹಕಾರ ಸಂಘಗಳು, ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತವೆ. ಸಂಘಗಳ ಬಲವರ್ಧನೆಗೆ ಗ್ರಾಮದಲ್ಲಿನ ಶೇ. 90ರಷ್ಟು ಜನರು ಸದಸ್ಯರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಹರ್ಷ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಶಂಕರೇಗೌಡ, ಸಂಪನ್ಮೂಲ ವ್ಯಕ್ತಿ ಕೆ.ಪಿ.ಅರುಣಕುಮಾರಿ ಇತರರಿದ್ದರು.