ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ಕರಾವಳಿಯ ರಂಗಕಲೆಯಾದ ಯಕ್ಷಗಾನವು ವಿಶ್ವದೆಲ್ಲೆಡೆ ಮಾನ್ಯತೆ ಪಡೆಯುತ್ತಿದೆ. ಅಲ್ಲದೆ, ಅಳಿವಿನಂಚಿನಲ್ಲಿರುವ ಈ ಭಾಗದ ಕಾವಿ ಕಲೆಗೂ ಸಹ ವಿಶ್ವ ಮನ್ನಣೆ ಲಭಿಸಬೇಕಿದೆ. ಯುವ ಪೀಳಿಗೆ ಈ ಎರಡೂ ಕಲೆಗಳಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು. ಕರಾವಳಿಯ ಈ ಸಂಸ್ಕೃತಿ
ಮುಂದುವರಿಯಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ಆಶಯ ವ್ಯಕ್ತಪಡಿಸಿದರು.
ಯುವಕ ಸಂಘದ ಮಾರ್ಗದರ್ಶಕ ಜಿ.ಆರ್. ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ಡಾ. ಗೌರೀಶ್ ಜೋಷಿ, ಬೆಂಗಳೂರು ಆರ್ಟ್ ಗ್ಯಾಲರಿಯ ಸಂಯೋಜಕ ಶಿವಪ್ರಸಾದ್, ಕಾವಿ ಆರ್ಟ್ ಫೌಂಡೇಷನ್ನ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.
ಉಡುಪಿಯ ಪಿಪಿಸಿ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಕುಮಾರ್ ಅಳಗೋಡು ಯಕ್ಷಗಾನ ಸಂಪ್ರದಾಯ ಹಾಗೂ ಹಿನ್ನೆಲೆ, ಲೇಖಕ ಮತ್ತು ವಿನ್ಯಾಸಗಾರ ಡಾ. ವಿಶ್ವನಾಥ ಎ.ಎಸ್. ಯಕ್ಷಗಾನ ವೇಷಭೂಷಣ ಮತ್ತು ಮುಖವರ್ಣಿಕೆ ಹಾಗೂ ಕಾವಿ ಕಲಾವಿದ ಡಾ. ಜನಾರ್ದನ್ ರಾವ್ ಹಾವಂಜೆ ಕಾವಿ ಕಲೆ ಮತ್ತು ಯಕ್ಷಗಾನ ವಿನ್ಯಾಸದಲ್ಲಿನ ಸಾಮ್ಯತೆ ಕುರಿತು ವಿಚಾರ ಮಂಡಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರಿಂದ ಕವಿ ದೇವದಾಸ ವಿರಚಿತ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನೆರವೇರಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ ಮಾಗೋಡು, ಮದ್ದಳೆಯಲ್ಲಿ ವೆಂಕಟೇಶ್ ಹೆಗಡೆ, ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರ, ಮುಮ್ಮೇಳದಲ್ಲಿ ಕೃಷ್ಣನಾಗಿ ಡಾ. ಶಿವಕುಮಾರ್ ಅಳಗೋಡು, ಕೌರವನಾಗಿ ಹಾವಂಜೆ ಮಂಜುನಾಥ ರಾವ್ ಹಾಗೂ ವಿದುರನಾಗಿ ಆದಿತ್ಯ ಹಾಲ್ಕೋಡು ಭಾಗವಹಿಸಿದ್ದರು.
ಬೆಂಗಳೂರಿನ ಜಯನಗರದ ಯುವ ಪಥದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಡಿ.8ರ ವರೆಗೂ ಕಾವಿ ಕಲೆಯ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ. 'ಕಾವ್ಯರೇಖಾ' ಕಾವಿ ಕಲಾ ಪ್ರದರ್ಶನದ ಭಾಗವಾಗಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ. | ಡಾ. ಜನಾರ್ದನ್ ರಾವ್ ಹಾವಂಜೆ. ಕಾವಿ ಕಲಾವಿದ ಅತಿಥಿ ಕಲಾವಿದರಿಂದ ಕವಿ ದೇವದಾಸ ವಿರಚಿತ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನೆರವೇರಿತು.