ಜಿಲ್ಲೆ

ಭ್ರೂಣ ಹತ್ಯೆ ಅಪಾಯಕಾರಿ ಬೆಳವಣಿಗೆ: ಮೈಸೂರು ರಂಗನಿರ್ದೇಶಕಿ ಕೆ.ಆರ್.ಸುಮತಿ ಆತಂಕ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ತೆಗೆಸುವಂತಹ ಕೃತ್ಯ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮೈಸೂರು ರಂಗನಿರ್ದೇಶಕಿ ಕೆ.ಆರ್.ಸುಮತಿ ವಿಷಾದಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ವಿಮಲಾರಣದಿವೆ ಮಹಿಳಾ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ‘ಪ್ರಸ್ತುತ ಸಂದರ್ಭದಲ್ಲಿ ದುಡಿಯುವ ವರ್ಗಕ್ಕಿರುವ ಸವಾಲುಗಳು ವಿಚಾರ ಸಂಕಿರಣ ಹಾಗೂ ನ್ಯಾಯ ಕೇಳಿದ ನಿಂಗವ್ವ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು. ಬಾಲ್ಯ ವಿವಾಹದಿಂದಲೂ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಭ್ರೂಣ ಹತ್ಯೆ ನಡೆಸುವ ಮೂಲಕ ತಾಯಿಯನ್ನೇ ತನ್ನ ಮಗುವಿನ ವಿರುದ್ಧ ನಿಲ್ಲಿಸುವ ಕೆಲಸ ಮಾಡಲಾಗುತ್ತಿದೆ. ಯಾವ ತಾಯಿಯೂ ತನ್ನ ಭ್ರೂಣ ತೆಗೆಸಿಕೊಳ್ಳಲು ಮುಂದೆ ಬರುವುದಿಲ್ಲ. ಆದರೆ ಇಲ್ಲಿ ಪುರುಷರು ಅಷ್ಟೊಂದು ಕ್ರೂರಿಯಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಏನಾದರೂ ಆಗಲಿ ಇಲ್ಲಿ ಏನೋ ಒಂದು ವ್ಯತ್ಯಾಸವಾಗಿದೆ. ಅದನ್ನು ಹುಡುಕಿ ಸಮಸ್ಯೆ ಬಗೆಹರಿಸಿಕೊಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಚಳವಳಿ ಎಂದಾಕ್ಷಣ ಮುಂಚೂಣಿಯಲ್ಲಿ ಹೆಸರು ಬರುವುದು ಮಂಡ್ಯ. ಆದರೆ ಇಲ್ಲಿ ಇಂತಹ ಬೆಳವಣಿಗೆಗೆಳು ನಡೆಯುತ್ತಿರುವುದರಿಂದ ಚಳವಳಿಗಾರರ ಸೋಲಾಗಿದೆ. ಕಾನೂನಾತ್ಮಕವಾಗಿ ಇಂತಹ ಕೆಟ್ಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಜತೆಗೆ ನಾಟಕದ ಮೂಲಕವೂ ಅರಿವು ಮೂಡಿಸುವ ಕೆಲಸವಾಗಬೇಕು. ಬದುಕು ಬವಣೆಯಿಂದ ಕೂಡಿರುವ ಜೀವನದಲ್ಲಿ ನಾಟಕ ನೋಡುವ ಮನೋಭಾವ ಬೆಳಸಿಕೊಳ್ಳಬೇಕು. ಇದು ಸ್ವಲ್ಪ ಸಮಯ ಮುದ ನೀಡುತ್ತದೆ. ಕೃಷಿ ಕಾರ್ಮಿಕರು ಹೆಚ್ಚಿರುವ ಕಡೆ ಕೂಲಿಕಾರರ ಬಗ್ಗೆ ನಾಟಕ ಪ್ರದರ್ಶನಗೊಳ್ಳಬೇಕು. ಇಲ್ಲಿ ಸತ್ಯವನ್ನು ಕೇಳುವ ಎದೆಗಾರಿಕೆ ಹೆಚ್ಚಬೇಕು ಎಂದು ಕರೆ ನೀಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸುರೇಶ್ ಶಂಭೂನಹಳ್ಳಿ, ಪ್ರಾಂತ ರೈತ ಸಂಘದ ಸಂಚಾಲಕ ಭರತ್‌ರಾಜ್, ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಸಿಪಿಎಂ ಪ್ರಧಾನ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮುಖಂಡರಾದ ಬಿ.ಹನುಮೇಶ್, ಬಿ.ಎಂ.ಶಿವಮಲ್ಲಯ್ಯ, ಆರ್.ರಾಜು, ಅಮಾಸಯ್ಯ, ಚಂದ್ರ ಇತರರಿದ್ದರು.