ಜಿಲ್ಲೆ

ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ 12ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕೆಎಲ್​ಇ ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಡಿ. 12ರಂದು ಅಂತರ ರಾಷ್ಟ್ರೀಯ ವಚನ ಚಳುವಳಿಯ ಸಾಹಿತ್ಯಿಕ ಮತ್ತು ಐತಿಹಾಸಿಕ ಅನುಸಂಧಾನ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಕನ್ನಡ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರೊ. ವೀಣಾ ಹೂಗಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ನ್ಯೂಜಿಲೆಂಡ್​ನ ಬಸವ ಸಮಿತಿ ಅಧ್ಯಕ್ಷ ಡಾ. ಲಿಂಗಪ್ಪಾ ಕಲಬುರ್ಗಿ ಕಾರ್ಯಕ್ರಮ ಉದ್ಘಾಟಿಸುವರು. ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಆಲೂರ ಅವರು "ನಿಷ್ಪತ್ತಿ' ಪುಸ್ತಕ ಬಿಡುಗಡೆಗೊಳಿಸುವರು. ಪುಣೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಶಶಿಕಾಂತ ಪಟ್ಟಣ ಆಶಯ ಭಾಷಣ ಮಾಡುವರು. ಹಾವೇರಿ ವಿವಿ ಕುಲಸಚಿವ ಸಿದ್ದಪ್ಪ ಬಾಗಲಕೋಟೆ ಪಾಲ್ಗೊಳ್ಳುವರು. ಕೆಎಲ್​ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ವಿ.ಐ.ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು.

ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು, ರಮೇಶ ಮೂಲಿಮನಿ, ಚಿನ್ನಸ್ವಾಮಿ ಸೋಸಲೆ ಪಾಲ್ಗೊಳ್ಳುವರು. ಪ್ರೊ. ವಿರೂಪಾ ಪೂಜಾರಹಳ್ಳಿ ವಿಚಾರ ಸಂಕಿರಣ ಕುರಿತು ಮಾತನಾಡುವರು. ನಿವೃತ್ತ ಪ್ರಾಧ್ಯಾಪಕ ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು ಎಂದರು.

ಪ್ರಾಚಾರ್ಯೆ ನೀಲಕ್ಕ ಪಾಟೀಲ, ಪ್ರೊ. ತಾರಾ ಬಿ.ಎನ್​., ಶ್ರೀದೇವಿ ಸಂಗೊಳ್ಳಿ, ಶಂಕರಲಿಂಗ ಶಿವಳ್ಳಿ, ಅಶೋಕ ಚಿಕ್ಕೋಡಿ, ಇತರರು ಇದ್ದರು.