ಜಿಲ್ಲೆ

ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯವಿರಲಿ: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಕರೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯದ ಭಾಷೆ ಕನ್ನಡ. ಆದ್ದರಿಂದ ಯಾರೇ ಆಗರಲಿ ಮೊದಲ ಪ್ರಾಶಸ್ತ್ಯ ಕನ್ನಡ ಭಾಷೆಯಾಗಿರಬೇಕು. ಬೇರೆ ರಾಜ್ಯಗಳಿಂದ ಬಂದಿರುವವರು ತಮ್ಮ ಮನೆಯ ಹೊಸ್ತಿಲಿನ ಒಳಗೆ ಅವರ ಭಾಷೆ ಬಳಸಬೇಕು ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೇಳಿದರು.

ಇಲ್ಲಿನ ಅಶೋಕ ನಗರದಲ್ಲಿರುವ ಜೈ ಕರ್ನಾಟಕ ಪರಿಷತ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಮಾತೃಭಾಷೆ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಾತೃಭಾಷೆ ಕನ್ನಡದ ನಂತರ ಇಂಗ್ಲೀಷ್, ಹಿಂದಿ ಭಾಷೆಗಳಿಗೆ ಆದ್ಯತೆ ನೀಡಬೇಕು. ಕರ್ನಾಟಕದ ಜನತೆ ಹೊರ ರಾಜ್ಯಗಳಿಗೆ ಹೋದಾಗ ಅನಿವಾರ್ಯವಾಗಿ ಅಲ್ಲಿನ ಸ್ಥಳೀಯ ಭಾಷೆ ಕಲಿಯುವಂತೆ, ರಾಜ್ಯಕ್ಕೆ ಆಗಮಿಸುವ ಹೊರ ರಾಜ್ಯಗಳ ಜನತೆಯೂ ಕನ್ನಡ ಭಾಷೆಯನ್ನು ಕಲಿಯಬೇಕು. ಇದು ಅನಿವಾರ್ಯವೂ ಹೌದು ಎಂದು ಹೇಳಿದರು.

ಪ್ರತಿಯೊಬ್ಬರೂ ಕನ್ನಡ ಭಾಷೆ, ಸಾಹಿತ್ಯ ಉಳಿಸಲು ಕಾರ್ಯೋನ್ಮುಖರಾಗಬೇಕು. ಇದು ಕನ್ನಡಿಗರ ಕರ್ತವ್ಯ ಕೂಡ. ನಮ್ಮ ಅಂತರಾಳ ಕೇಳುವುದಾದರೆ ನಾವು ಕನ್ನಡವನ್ನು ಅನಧಿಕೃತವಾಗಿ ಕೊಲೆ ಮಾಡಿಕೊಂಡು ಬಂದಿದ್ದೇವೆ. ಏಕೆಂದರೆ ಕನ್ನಡ ಶಾಲೆಯಲ್ಲಿ ಓದಿದ ನಾವು ನಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುತ್ತಿದ್ದೇವೆ. ಒಂದಷ್ಟು ಕನ್ನಡದ ಬಗ್ಗೆ ಮಾತನಾಡುವ ನಾವು ಕನ್ನಡದ ಕೆಲಸಗಳಿಗೆ ತೊಡಗಿಸಿಕೊಳ್ಳವುದಿಲ್ಲ. ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಮೊಬೈಲ್, ಮನೆಗಳಲ್ಲಿ ಟಿವಿ ನಮ್ಮ ಮುಂದೆ ಇರುತ್ತದೆ. ಆದರೆ ಎಷ್ಟು ಜನರ ಕೈಯಲ್ಲಿ ಕನ್ನಡ ಪುಸ್ತಕ ಇರುತ್ತದೆ ಎಂಬುದು ಪ್ರಶ್ನೆಯಾಗಿದ್ದು, ಪ್ರತಿನಿತ್ಯ ಕನಿಷ್ಟ 8 ಪುಟಗಳಾದರೂ ಓದಬೇಕು. ಕನ್ನಡ ಭಾಷೆ, ಸಂಸ್ಕೃತಿ ವಿಷಯವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಪರಿಷತ್‌ನ ಎಲ್ಲ ಶಾಖಾಧ್ಯಕ್ಷರು ಹೆಚ್ಚಿನ ಸಮಾಜದ ಸೇವೆಯಲ್ಲಿ ತೊಡಗಿದರೆ ಅದು ಅವರ ಸಾಧನೆಯಾಗುತ್ತದೆ. ತಮ್ಮ ವೃತಿಯ ಜತೆಯಲ್ಲಿ ಪ್ರವೃತ್ತಿ ಮಾಡವುದು ಬಹಳ ದೊಡ್ಡತನ. ಇದೇ ರೀತಿ ಕನ್ನಡ ಹೋರಾಟ, ಸಾಹಿತ್ಯ ಜಾಗೃತಿ, ಕಾನೂನು ಜಾಗೃತಿಯಂತಹ ಕಾರ್ಯಕ್ರಮಗಳನ್ನು ನಿಮ್ಮ ಶಾಖೆಗಳಲ್ಲಿ ನಡೆಸಿ ಅಸಕ್ತರನ್ನು ಸಕ್ತರಾಗಿಸುವ ಹೊಣೆ ಶಾಖಾಧ್ಯಕ್ಷರ ಮೇಲಿದೆ ಎಂದರು.

ಕೆ.ಬಿ.ಕೆಂಪೇಗೌಡ, ಬಿ.ಪುಟ್ಟಸ್ವಾಮಿ, ಸುಶೀಲಮ್ಮ, ತನುಜಾ ಕಂಪೇಗೌಡ, ಮಂಜುಳಾ ದೇವರಾಜ್, ರೇಖಾ, ಎಂ.ಪುಟ್ಟಸ್ವಾಮಿ, ಗೆಲುವಂತ್, ನಿಶ್ಚಿತ್, ಯಶಸ್, ಅಮೋಘ ಇತರರಿದ್ದರು. ಇದೇ ಸಂದರ್ಭದಲ್ಲಿ 32ನೇ ವಾರ್ಡ್ ಶಾಖೆ ಮಹಿಳಾಧ್ಯಕ್ಷೆಯಾಗಿ ಬಿ.ವಿ.ವರಲಕ್ಷ್ಮೀ, 34ನೇ ವಾರ್ಡ್ ಮಹಿಳಾ ಶಾಖಾಧ್ಯಕ್ಷೆಯನ್ನಾಗಿ ನಾಗಮ್ಮ ಅವರನ್ನು ನೇಮಕ ಮಾಡಲಾಯಿತು. ಜಿ.ವಿ.ನಾಗರಾಜು ನೇಮಕಾತಿ ಪತ್ರ ವಿತರಣೆ ಮಾಡಿದರು.