ಅಮೃತ ವಿಶ್ವ ವಿದ್ಯಾಪೀಠಂ ವತಿಯಿಂದ ಜೂ.23 ಮತ್ತು 24 ರಂದು ಸಂಸ್ಥೆಯ ಆವರಣದಲ್ಲಿ ಕಂಪ್ಯೂಟಿಂಗ್ ಹಾಗೂ ಹ್ಯುಮ್ಯಾನಿಟೇರಿಯನ್ ಅಪ್ಲಿಕೇಶನ್ಸ್ ಎಂಬ ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಜಿ.ರವೀಂದ್ರನಾಥ್ ತಿಳಿಸಿದರು.
ಕ್ಷೇತ್ರದ ತಜ್ಞರು, ಸಂಶೋಧಕರು, ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಈ ಕ್ಷೇತ್ರದಲ್ಲಾಗುತ್ತಿರುವ ಮಹತ್ತರ ಬೆಳವಣಿಗೆಯನ್ನು ಚರ್ಚಿಸುವ ಪ್ರಯತ್ನ ಇದಾಗಿದೆ. 23ರಂದು ಬೆಳಗ್ಗೆ 9.30ಕ್ಕೆ ವಿಚಾರಸಂಕಿರಣ ಉದ್ಘಾಟನೆಗೊಳ್ಳಲಿದೆ. ಡಿಆರ್‌ಡಿಒ ವಿಜ್ಞಾನಿ ಡಾ.ಕೆ.ರಾಜಲಕ್ಷ್ಮೀ ಮೆನನ್, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಚಾರಸಂಕಿರಣದಲ್ಲಿ 4 ಮುಖ್ಯ ದಿಕ್ಕೂಚಿ ಭಾಷಣ ಇರಲಿವೆ. ಈ ವಿಚಾರ ಮಂಡನೆಗಳು ಕಂಪ್ಯೂಟಿಂಗ್ ಮತ್ತು ಹ್ಯುಮ್ಯಾನಿಟೇರಿಯನ್ ಅಪ್ಲಿಕೇಶನ್ ಕ್ಷೇತ್ರದ ಅನ್ವಯಿಕತೆಗಳ ಕುರಿತಾಗಿರಲಿವೆ. ದುಬೈ ನಾಲೆಡ್ಜ್ ಪಾರ್ಕ್ ಸಹಾಯಕ ಪ್ರಾಧ್ಯಾಪಕ ಡಾ.ಮನೋಜ್ ಕುಮಾರ್, ಮಲೇಶಿಯಾದ ಕಂಪ್ಯೂಟರ್ ವಿಜ್ಞಾನ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರೊ.ಪಿ.ಶಿವಕುಮಾರ್ ಇತರರು ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.