ಜಿಲ್ಲೆ

ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದ ವಂಚನೆ : ಅಶ್ವಿನಿ ಎಂ.ಎಲ್. ಆರೋಪ

ಸೌಮ್ಯ ಆರ್

ಕಾಸರಗೋಡು: ಭಾರತದ ಸಂವಿಧಾನಶಿಲ್ಪಿ, ರಾಷ್ಟ್ರ ನವೋತ್ಥಾನದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಕಾಸರಗೋಡಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕೇರಳದ ಎಡ- ಬಲ ರಾಜಕೀಯ ರಂಗಗಳು ಡಾ.ಅಂಬೇಡ್ಕರ್ ಮೇಲೆ ತೋರುತ್ತಾ ಬಂದಿರುವ ಕಪಟ ಪ್ರೇಮ ಇಂದು ಅನಾವರಣಗೊಂಡಿದೆ. ಈ ಹಿಂದೆ ಅಂಬೇಡ್ಕರ್ ಅವರಿಗೆ ದೇಶದ ಪರಮೋನ್ನತ ಪ್ರಶಸ್ತಿ ಭಾರತ ರತ್ನ ನಿಷೇಧಿಸಿದ ಕಾಂಗ್ರೆಸ್ಸಿಗರು ಈಗ ಅಂಬೇಡ್ಕರ್ ಮೇಲೆ ಕಪಟ ಪ್ರೀತಿ ತೋರಿಸುತ್ತಿರುವುದು ವಿಷಾದನೀಯ ಎಂದರು.

ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಬೇಬಿ ಸುನಗರ್ ‘ಡಾ.ಬಿ.ಆರ್.ಅಂಬೇಡ್ಕರ್- ಕಾಂಗ್ರೆಸ್ ಸರ್ಕಾರದ ಅವಗಣನೆಯೂ ನರೇಂದ್ರ ಮೋದಿ ಸರ್ಕಾರದ ಪರಿಗಣನೆಯೂ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎ.ಕೆ.ಕಯ್ಯರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಣಿಕಂಠ ರೈ, ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಪಿ.ಆರ್.ಸುನೀಲ್, ಕಾರ್ಯದರ್ಶಿ ಸಂಜೀವ ಪುಳ್ಕೂರು, ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಅಶ್ವಿನಿ ಕೆ.ಎಂ., ವೀಣಾ ಕುಮಾರಿ, ಮಧೂರು ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣ, ರಾಮಪ್ಪ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.