ಆರ್.ಕೃಷ್ಣ ಮೈಸೂರು
ಜಿಲ್ಲೆಯಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಸ್ಥಾಪಿಸಲು ಅಂತಿಮವಾಗಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಇದರಿಂದ ಡೋಲಾಯಮಾನವಾಗಿದ್ದ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಜಿಲ್ಲೆಯಲ್ಲಿ ಸ್ಥಾಪನೆಗೊಂಡು ಉದ್ಯೋಗ ಸೃಷ್ಟಿಗೆ, ಕೈಗಾರಿಕೆ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಂತಾಗಿದೆ.
ಬೆಂಗಳೂರಿನಲ್ಲಿ ಆಯೋಜಿಸಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿಯೂ ಸೆಮಿಕಂಡಕ್ಟರ್ ಸ್ಥಾಪನೆಗೆ ಬಂಡವಾಳಗಾರರ ಮುಂದೆ ಪ್ರಸ್ತಾಪ ಮುಂದಿಟ್ಟಿದ್ದು, ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಮುಂದಾಗಿದ್ದಾರೆ.
ಮೂರು ವರ್ಷಗಳ ಹಿಂದೆಯೇ ನಂಜನಗೂಡು ತಾಲೂಕು ಕೊಚ್ಚನಹಳ್ಳಿಯಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ ಇತ್ತಾದರೂ ಗುಜರಾತ್ ಹಾಗೂ ನೆರೆಯ ಆಂಧ್ರಪ್ರದೇಶಗಳು ಬಂಡವಾಳಗಾರರನ್ನು ಆಕರ್ಷಿಸಿತ್ತು. ಹೀಗಾಗಿ ಆ ರಾಜ್ಯಗಳತ್ತ ಬಂಡವಾಳಗಾರರು ತೆರಳಿದ್ದರಿಂದ ಮೈಸೂರು ಜಿಲ್ಲೆಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತು.
3,425 ಕೋಟಿ ರೂ. ಬಂಡವಾಳ ಹೂಡಿಕೆ:
ಜೊಹೊ ನಿರ್ದೇಶಕರು ಸ್ಥಾಪಿಸಿದ ಚೆನ್ನೈ ಮೂಲದ ಸಿಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಕೊಚ್ಚನಹಳ್ಳಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ನಲ್ಲಿ 3,425.60 ಕೋಟಿ ರೂ. ಹೂಡಿಕೆ ಮಾಡಲು ಸಜ್ಜಾಗಿದೆ. ಈ ಉದ್ಯಮವು 460 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದ್ದು, 40 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಅಲ್ಲದೆ ಮೈಸೂರು ಮೂಲದ ಕೇನ್ಸ್ ಟೆಕ್ನಾಲಜಿ ಮತ್ತು ಇತರ ಕಂಪನಿಗಳು ಈ ಕ್ಲಸ್ಟರ್‌ನಲ್ಲಿ ಹೂಡಿಕೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿವೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಡಕೋಳ ಬಳಿಯ ಕೊಚ್ಚನಹಳ್ಳಿಯಲ್ಲಿ 234 ಎಕರೆ ಭೂಮಿಯನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ಹಾಗೂ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗಾಗಿ ಮೀಸಲಿಟ್ಟಿದೆ. ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರವು ಹೊಸ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ ನೀತಿಯನ್ನು ಪರಿಚಯಿಸಲು ಯೋಜಿಸಿದೆ.
ಈ ಕ್ಲಸ್ಟರ್‌ನಲ್ಲಿ 140 ಎಕರೆಗಳನ್ನು ನಿರ್ದಿಷ್ಟವಾಗಿ ಸೆಮಿಕಂಡಕ್ಟರ್ ಪಾರ್ಕ್‌ಗಾಗಿ ಕಾಯ್ದಿರಿಸಲಾಗಿದೆ. ಉಳಿದಂತೆ ಆಂತರಿಕ ಪ್ಲಾಟ್‌ಗಳು, ಉದ್ಯಾನ, ವಿಶಾಲ ರಸ್ತೆಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಮೂಲಸೌಕರ್ಯಗಳನ್ನು ಒಳಗೊಂಡಿದೆ.
ಸೆಮಿಕಂಡಕ್ಟರ್ ಕಂಪನಿಗಳ ಸ್ಥಾಪನೆಯಿಂದ ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಇತರ ರಾಜ್ಯಗಳಿಂದ ನುರಿತ ವೃತ್ತಿಪರರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಅಲ್ಲದೆ ಮೈಸೂರಿನ ಮಾರುಕಟ್ಟೆ, ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ.
ಸ್ವಾವಲಂಬಿ ಭಾರತಕ್ಕೆ ಒತ್ತು:
ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಯಿಂದ ಭಾರತ ಸ್ವಾವಲಂಬಿಯಾಗಲಿದೆ. ಅಲ್ಲದೆ ವಿದೇಶಿ ವಿನಿಮಯ ಉಳಿತಾಯವಾಗಲಿದೆ. ಇದುವರೆವಿಗೆ ಭಾರತ ಸೆಮಿಕಂಡಕ್ಟರ್‌ಗಳಿಗಾಗಿ ಚೀನಾದಂಥ ದೇಶಗಳನ್ನು ಅವಲಂಬಿಸಿ ಅಲ್ಲಿಂದ ಆಮದು ಮಾಡಿಕೊಳ್ಳಬೇಕಿತ್ತು. ಸೆಮಿಕಂಡಕ್ಟರ್‌ಗಳನ್ನು ಮೊಬೈಲ್ ಫೋನ್‌ಗಳು, ಕಂಪ್ಯೂಟರ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಸ್ಥಳೀಯವಾಗಿಯೇ ಉತ್ಪಾದನೆಯಾದರೆ ಇಂತಹ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯೂ ಅಗಿ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಉತ್ಪನ್ನಗಳು ದೊರೆಯುವ ನಿರೀಕ್ಷೆಯಿದೆ.
ಎಲೆಕ್ಟ್ರಾನಿಕ್ಸ್ ಹಬ್ ಆಗಲಿದೆ:
ಹತ್ತಾರು ವರ್ಷಗಳಿಂದ ಇಲ್ಲಿಯೇ ಪಿಸಿಬಿ(ಪ್ರಿಂಟೆಂಡ್ ಸರ್ಕ್ಯೂಟ್ ಬೋರ್ಡ್)ಗಳು ತಯಾರಾಗುತ್ತಿವೆ. ಬೋರ್ಡ್‌ಗಳನ್ನು ಜೋಡಣೆ ಮಾಡುವ ಅಸೆಂಬ್ಲಿಂಗ್ ಕಂಪನಿಗಳಿವೆ. ಇದಲ್ಲದೆ ಇವುಗಳನ್ನು ಪರೀಕ್ಷಿಸಲು ಪರೀಕ್ಷೆ ಸೌಲಭ್ಯಗಳಿವೆ. ಇದೀಗ ಚಿಪ್ ಮಾದರಿಯ ಸೆಮಿಕಂಡಕ್ಟರ್ ಅಸೆಂಬ್ಲಿಂಗ್ ಆ್ಯಂಡ್ ಪ್ಯಾಕೇಜಿಂಗ್ ಘಟಕ ಆರಂಭವಾಗುತ್ತಿದೆ. ಇನ್ನು ಮುಂದೆ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣ ತಯಾರಿಸಲು ಬೇಕಾದ ಸೆಮಿಕಂಡಕ್ಟರ್ ಕೂಡ ಮೈಸೂರಿನಲ್ಲಿಯೇ ಲಭ್ಯವಾಗುತ್ತದೆ.
ಹೊಸ ಕಂಪನಿಗಳ ಆಗಮನ:
ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವವರು ಇದೀಗ ಬೇರೆ ಕಡೆಯಿಂದ ಸೆಮಿಕಂಡಕ್ಟರ್ ತರಿಸಿಕೊಂಡು ಪಿಸಿಬಿ ಬೋರ್ಡ್‌ಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿದೆ. ಮೈಸೂರಿನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿಂಗ್ ಆ್ಯಂಡ್ ಪ್ಯಾಕೇಜಿಂಗ್ ಘಟಕ ಆರಂಭವಾದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕೆ ಸಂಬಂಧಿಸಿದ ಎಲ್ಲ ಘಟಕಗಳು ಮೈಸೂರಿನಲ್ಲಿಯೇ ಲಭ್ಯವಾಗುತ್ತವೆ. ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮೈಸೂರಿನಲ್ಲಿಯೇ ತಯಾರಿಸಬಹುದಾಗಿದೆ. ಭವಿಷ್ಯದಲ್ಲಿ ಹೊಸ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವ ಕಂಪನಿಗಳು ನಗರಕ್ಕೆ ಬರುತ್ತವೆ.
ಆರ್ಥಿಕ ಬೆಳವಣಿಗೆಗೆ ಪೂರಕ
ಸೆಮಿಕಂಡಕ್ಟರ್ ಘಟಕ ಆರಂಭ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ. ಉದ್ಯೋಗ ಸೃಷ್ಟಿ ಜತೆಗೆ ಸ್ಥಳೀಯವಾಗಿಯೇ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಬೇಕಾದ ಚಿಪ್‌ಗಳು ದೊರೆಯುವುದರಿಂದ ವಿದೇಶಿ ವಿನಿಮಯ ಉಳಿತಾಯವಾಗುವುದಲ್ಲದೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ಪನ್ನಗಳು ದೊರೆಯುತ್ತವೆ. ಇದರಿಂದ ಕೈಗಾರಿಕೆ ಬೆಳವಣಿಗೆ ಪೂರಕವಾಗಲಿದೆ.
ಸುರೇಶ್‌ಕುಮಾರ್ ಜೈನ್
ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ