ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದರು.  
ಜಿಲ್ಲೆ

ಗಾಂಜಾ ಮಾರಾಟ: ಗಡಿಪಾರಾಗಿದ್ದವ ಸೇರಿ ನಾಲ್ವರ ಬಂಧನ

ನವೀನ ಬಿ.ಎಂ

ಶಿವಮೊಗ್ಗ: ನಗರದ ಎಂಆರ್‌ಎಸ್ ವೃತ್ತದಿಂದ ವಡ್ಡಿನಕೊಪ್ಪಕ್ಕೆ ತೆರಳುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಶನಿವಾರ ಬಂಧಿಸಿದ್ದು 1.10 ಲಕ್ಷ ರೂ. ಮೌಲ್ಯದ 2 ಕೆಜಿ ಒಣ ಗಾಂಜಾ ಮತ್ತು 2.50 ಲಕ್ಷ ರೂ. ಮೌಲ್ಯದ ಕೆಟಿಎಂ ಡ್ಯೂಕ್ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.

ಸವಾರಲೈನ್ ರಸ್ತೆಯ ಪ್ರವೀಣ್ ಅಲಿಯಾಸ್ ಮೋಟು (24), ಹೊಸಮನೆ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ 6ನೇ ತಿರುವಿನ ವಿ.ವಿಶಾಲ್ ಅಲಿಯಾಸ್ ಡಾಲು (25), ತುಮಕೂರು ಜಿಲ್ಲೆ ತಿಪಟೂರಿನ ಎಸ್.ವೈ.ನಿತೀಶ್ (21), ಗಾಡಿಕೊಪ್ಪ 1ನೇ ತಿರುವಿನ ಕೆ.ಪ್ರೀತಂ ಅಲಿಯಾಸ್ ಡಿಟೋ (22) ಬಂಧಿತರು.
ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಆರ್‌ಬಿ ಡಿವೈಎಸ್ಪಿ ಡಿ.ಟಿ.ಪ್ರಭು ಮೇಲ್ವಿಚಾರಣೆಯಲ್ಲಿ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮರ್ದಾನ್ ಕಿರ್ವಾಡಿ, ಸಂದೀಪ್, ಸಮಿವುಲ್ಲಾ, ಚಿದಂಬರ್, ಫಿರ್ದೋಸ್ ಅಹಮ್ಮದ್, ಪರಮೇಶ್ವರಪ್ಪ, ರವಿ, ಪ್ರಮೋದ್, ಜಗದೀಶ್, ಸಂಗಮೇಶ್, ಪ್ರಕಾಶ್ ನಾಯ್ಕ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಬಂಧಿತರಲ್ಲಿ ಪ್ರವೀಣ್ ಮತ್ತು ವಿ.ವಿಶಾಲ್ ರೌಡಿಶೀಟರ್‌ಗಳಾಗಿದ್ದಾರೆ. ಅದರಲ್ಲೂ ಪ್ರವೀಣ್ ಮೇಲೆ ಜಿಲ್ಲೆಯ ವಿವಿಧ ಠಾಣೆಯಲ್ಲಿ 10 ಪ್ರಕರಣಗಳಿದ್ದು 2024ರ ಏಪ್ರಿಲ್‌ವರೆಗೂ ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಆದರೂ ಆದೇಶ ಉಲ್ಲಂಘಿಸಿ ಗಾಂಜಾ ಮಾರಾಟದಲ್ಲಿ ತೊಡಗಿದ್ದು ದೃಢಪಟ್ಟಿದೆ. ವಿಶಾಲ್ ಮೇಲೆ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ. 4ನೇ ಆರೋಪಿ ಕೆ.ಪ್ರೀತಂ ವಿರುದ್ಧ ಈ ಹಿಂದೆ ತುಂಗಾನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.