ಜಿಲ್ಲೆ

ವಂದೇ ಭಾರತ್​ನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡ ಜನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಂದೇ ಭಾರತ್ ರೈಲು ಸಂಚಾರದ ಹಿನ್ನೆಲೆಯಲ್ಲಿ ಧಾರವಾಡ ಮತ್ತು ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ಮಂಗಳವಾರದಂದು ಹಬ್ಬದ ವಾತಾವರಣ ನಿರ್ವಣಗೊಂಡಿತ್ತು. ನಿಲ್ದಾಣಗಳನ್ನು ಹೂವು, ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು.

ಉದ್ಘಾಟನಾ ಸಂಚಾರ ಪ್ರಾರಂಭಿಸಿದ ವಂದೇ ಭಾರತ್ ರೈಲು ವೀಕ್ಷಣೆಯೇ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಸಡಗರ ಮೂಡಿಸಿತ್ತು. ವಂದೇ ಭಾರತ್ ರೈಲು ಧಾರವಾಡದಿಂದ ಸಂಚಾರ ಪ್ರಾರಂಭಿಸಿತು. ರೈಲು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸುವ ಅಂದಾಜು ಒಂದೂವರೆ ತಾಸಿನ ಮುಂಚೆಯೇ ಸಾರ್ವಜನಿಕರು ನಿಲ್ದಾಣದಲ್ಲಿ ಸೇರಿದ್ದರು.

ರೈಲಿನ ಎದುರು ನಿಂತು ಅನೇಕರು ಮೋಬೈಲ್ ಫೋನ್​ಗಳಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಸ್ನೇಹಿತರು ಗುಂಪುಗುಂಪಾಗಿ ಫೋಟೊ ತೆಗೆಯಿಸಿಕೊಂಡರು. ಕೆಲವರು ರೈಲು ಏರಿ, ಸುತ್ತಾಡಿದರು. ವಂದೇ ಭಾರತ್ ರೈಲಿನ ಜತೆಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರು.

ವಂದೇ ಭಾರತ್ ರೈಲಿನ ವೇಗ, ಅದರಲ್ಲಿ ದೊರಕುವ ಸೌಲಭ್ಯ, ಟಿಕೆಟ್ ದರ ಹಾಗೂ ಮತ್ತಿತರ ವಿಷಯಗಳು ಸಾರ್ವಜನಿಕರಲ್ಲಿ ಚರ್ಚೆಗೆ ಬಂದಿದ್ದು ಕಂಡುಬಂದಿತು.

ಬೇರೆ ರೈಲಿಗಾಗಿ ಕಾಯುತ್ತಿದ್ದ ಅನೇಕ ಪ್ರಯಾಣಿಕರು ಸಹ ನಿಲ್ದಾಣದಲ್ಲಿ ನಿಂತಿದ್ದ ವಂದೇ ಭಾರತ್ ರೈಲಿನ ಎದುರು ಕುಟುಂಬ ಸಮೇತರಾಗಿ ಫೋಟೊ ತೆಗೆಯಿಸಿಕೊಳ್ಳುತ್ತಿರುವುದು ಕಾಣಿಸಿತು.