ಜಿಲ್ಲೆ

ನಿಸ್ವಾರ್ಥ ಸೇವೆಯಿಂದ ಸಂಘದ ಏಳಿಗೆ

ಪ್ರಶಾಂತ ಹೂಗಾರ

ಸಂಕೇಶ್ವರ: ಸಹಕಾರ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಎಲ್ಲ ಸೇವೆಗಳನ್ನು ಒದಗಿಸಲು ಮುಂದಾಗಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.

ಪಟ್ಟಣದ ಶಂಕರಲಿಂಗ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೀಪಲ್ಸ್ ಕೋ-ಆಪ್ ಸೊಸೈಟಿ ದಶಮಾನೋತ್ಸವ ಹಾಗೂ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ನಿಸ್ವಾರ್ಥದಿಂದ ಸೇವೆ ಸಲ್ಲಿಸಿದರೆ ಮಾತ್ರ ಸಂಘ ಪ್ರಗತಿ ಕಾಣುತ್ತವೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಅಮರ ನಲವಡೆ ಮಾತನಾಡಿ, ಸಹಕಾರಿ ಪ್ರಗತಿ ಸಾಧಿಸುತ್ತಿರುವುದು ಸಂತಸ ಎಂದರು.

ಸಂಘದ ಅಧ್ಯಕ್ಷೆ ಶಹನಾಜ್ ಗಡೇಕಾಯಿ ಮಾತನಾಡಿ, ಸಂಘ ಕಳೆದ ವರ್ಷದಲ್ಲಿ 5.30 ಕೋಟಿ ರೂ. ಠೇವು ಸಂಗ್ರಹಿಸುವ ಮೂಲಕ 10 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಟ್ ನೀಡಲಾಗುವುದು ಎಂದರು.

ಸಂಘದ ನಿರ್ದೇಶಕ ಪವನ ಕಣಗಲಿ ಮಾತನಾಡಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಂಘ ಪ್ರಗತಿ ಹೊಂದಿದೆ ಎಂದರು. ಮುಖ್ಯ ಕಾರ್ಯನಿರ್ವಾಹಕ ಶ್ಯಾಮಲಿಂಗ ಹಾಲಟ್ಟಿ ವಾರ್ಷಿಕ ವರದಿ ಓದಿದರು.

ಸಂಸ್ಥೆಯ ಸಂಸ್ಥಾಪಕ ಪ್ರಕಾಶ ಕಣಗಲಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಶ್ರೀಕಾಂತ ಹತನೂರಿ, ಶಾಂತಿನಾಥ ಖಾನಾಪುರೆ, ಸಂಜಯ ಶಿರಕೋಳಿ, ಉಪಾಧ್ಯಕ್ಷ ಚಿದಾನಂದ ಇಂಡಿ, ನಿರ್ದೇಶಕರಾದ ಆನಂದ ಹಾಲದೇವರಮಠ, ಸೂರ್ಯಕಾಂತ ಖಾಡೆ, ಸಚಿನ ಸಪಾಟೆ, ಶೀತಲ ಚೋರಗೆ, ಶಿವಗೌಡ ಪಾಟೀಲ, ಕಪೀಲ ಕೋಳೆಕರ, ಸುರೇಶ ನಾಯಿಕ, ಸಾಗರ ಗೋಂಧಳಿ, ವಿಲಾಸ ಹಿರೇಮನಿ ಇತರರು ಇದ್ದರು.132