ಮೈಸೂರು: ಭಾರತದ ಸೈನ್ಯಕ್ಕೆ ಅಗ್ನಿವೀರರಾಗಿ ಆಯ್ಕೆಯಾಗಿರುವ ಯುವಕರು ನಿಸ್ವಾರ್ಥತೆಯಿಂದ ದೇಶದ ಗಡಿ ಕಾಯುವ ಯೋಧರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.
ಬೆಳವಾಡಿಯ ಸೈನಿಕ್ ಅಕಾಡೆಮಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಗ್ನಿವೀರರಾಗಿ ಸೈನ್ಯಕ್ಕೆ ಆಯ್ಕೆಗೊಂಡ 72 ಯುವ ಸೈನಿಕರನ್ನು ಅಭಿನಂದಿಸಿ ಮಾತನಾಡಿ, ಸೈನ್ಯಕ್ಕೆ ರಾಜಕೀಯ ವ್ಯಕ್ತಿಗಳ ಮಕ್ಕಳಾಗಲಿ, ಐಎಎಸ್, ಐಪಿಎಸ್ ಅಧಿಕಾರಿಗಳ ಮಕ್ಕಳಾಗಲಿ ಹೋಗುವುದಿಲ್ಲ. ರೈತರ ಮಕ್ಕಳು, ಬಡವರ ಮಕ್ಕಳು ಮಾತ್ರ ಸೈನ್ಯಕ್ಕೆ ಸೇರುತ್ತಾರೆ. ಆದ್ದರಿಂದಲೇ ಸೈನಿಕರ ಬ್ಯಾಡ್ಜ್‌ನಲ್ಲಿ ಜೈ ಜವಾನ್, ಜೈ ಕಿಸಾನ್ ಎಂದು ಬರೆಯಲಾಗಿದೆ ಎಂದರು.
ನಾನು ಒಬ್ಬ ಮಾಜಿ ಸೈನಿಕನಾಗಿದ್ದು, ಸೈನ್ಯ ನನಗೆ ಶಿಸ್ತನ್ನು ಕಲಿಸಿದೆ. ಬದುಕನ್ನು ಕಲಿಸಿದೆ. ಸೈನ್ಯಕ್ಕೆ ಸೇರುವ ಯುವಕರು ಎಷ್ಟೇ ಕಷ್ಟವಾದರೂ ಬಿಟ್ಟು ಬರಬೇಡಿ. ಯಾರು ಜೀವನದಲ್ಲಿ ಮೊದಲು ಕಷ್ಟಪಡುತ್ತಾರೋ ಕೊನೆಯಲ್ಲಿ ಸುಖಪಡುತ್ತಾರೆ. ಅದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.
ಸಮಾರಂಭದಲ್ಲಿ ಹಾಸನದ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಜಿ.ಪಂ. ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ಸೈನಿಕ್ ಅಮಾಡೆಮಿಯ ಅಧ್ಯಕ್ಷ ಶ್ರೀಧರ್, ಮಾಜಿ ಯೋಧರ ಸಂಘದ ಜಿಲ್ಲಾ ಅಧ್ಯಕ್ಷ ದಿವಾಕರ್ ಹಾಗೂ ಇತರರು ಇದ್ದರು.