ಸವದತ್ತಿ: ವೈಯಕ್ತಿಕ ಸ್ವಾರ್ಥಕ್ಕಾಗಿ ಅರಣ್ಯ ನಾಶ, ಗಣಿಗಾರಿಕೆ, ಕೈಗಾರಿಕೆಯಿಂದ ವಾತಾವರಣ ಹಾನಿಗೀಡಾಗುತ್ತಿದೆ. ಇದರಿಂದ ಪರಿಸರಕ್ಕೆ ಮಾತ್ರವಲ್ಲದೆ ಜನರ ಜೀವನ ಮೇಲೂ ಪರಿಣಾಮ ಬೀರಲಿದ್ದು, ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳೆಸುವ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ತಾಲೂಕಿನ ಉಗರಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಮಾಜಿಕ ಅರಣ್ಯ ವಲಯದಿಂದ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯವಾಗಿದೆ.
143ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಕಾಡು ಬೆಳೆಸಿ, ನಾಡು ಉಳಿಸುವ ಪ್ರತಿಜ್ಞೆಯೊಂದಿಗೆ ಪರಿಸರ ಸಂರಕ್ಷಣೆಗೆ ಶ್ರಮಿಸೋಣ ಎಂದರು.
ತಹಸೀಲ್ದಾರ್ ಎಂ.ಎನ್. ಹೆಗ್ಗನವರ ಮಾತನಾಡಿ, ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಸಾವಯವ ವಸ್ತುಗಳ ಬಳಕೆ ಜತೆಗೆ ಸಸಿ ನೆಟ್ಟು ಪರಿಸರ ಸಂರಕ್ಷಿಸಲು ಮುಂದಾಗೋಣ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೇದೂಸಿಂಗ್ ರಾಥೋಡ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ, ಪರಿಸರ ಸಂರಕ್ಷಣೆ ಕುರಿತು ವಿವರಿಸಿದರು. ತಾಪಂ ಇಒ ಆನಂದ ಬಡಕುಂದ್ರಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಉಪಾಧ್ಯಕ್ಷ ನೀಲಪ್ಪ ಸಿದ್ದಕ್ಕನವರ, ಕೆಡಿಪಿ ಸದಸ್ಯ ಮಂಜುನಾಥ ಇಮ್ರಾಪುರ, ಶಂಕರಗೌಡ ರೇಣಕೆಗೌಡ್ರ, ಮಾರುತಿ ಶಿಂಧೆ, ಮಾಜಿ ಜಿಪಂ ಸದಸ್ಯ ರಾಮನಗೌಡ ತಿಪರಾಶಿ ಇತರರಿದ್ದರು.