ಮೂಡಿಗೆರೆ: ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯ ಜೀವನ
ನಡೆಸುವಂತಾಗಿದೆ. ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆ ಮಹಿಳೆಯರಿಗೆ ವರವಾಗಿದ್ದು,
ಅನ್ನಭಾಗ್ಯದಿಂದ ಹಸಿವು ಮುಕ್ತ ಸಮಾಜ ನಿರ್ಮಾಣವಾಗಿದೆ ಎಂದು ಶಾಸಕಿ ನಯನಾ
ಮೋಟಮ್ಮ ಹೇಳಿದರು.
ಪಟ್ಟಣದ ಬಸ್‌ನಿಲ್ದಾಣದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗೆ ಎರಡು ವರ್ಷವಾದ
ಹಿನ್ನಲೆಯಲ್ಲಿ ಆಯೋಜಿಸಿದ್ದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಶಕ್ತಿ ಯೋಜನೆಯಲ್ಲಿ
ರಾಜ್ಯದಲ್ಲಿ 500 ಕೋಟಿ ಮಹಿಳೆಯರು, ತಾಲೂಕಿನಲ್ಲಿ 82 ಲಕ್ಷ ಮಹಿಳೆಯರು ಉಚಿತವಾಗಿ
ಪ್ರಯಾಣಿಸಿದ್ದಾರೆ. ಅದಕ್ಕಾಗಿ ಸರ್ಕಾರ ಸಾರಿಗೆ ಸಂಸ್ಥೆಗೆ 39 ಕೋಟಿ ರೂ. ಪಾವತಿಸಿದೆ.
ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಸರ್ಕಾರಕ್ಕೆ ಕೆಟ್ಟ ಹೆಸರು
ತರಲು ವಿಪಕ್ಷಗಳು ಟೀಕಿಸುತ್ತವೆ. ಬಸ್ ಪ್ರಯಾಣಕ್ಕಾಗಿ ಹಣ ನೀಡುವಂತೆ ಮಹಿಳೆಯರು
ಕೈಚಾಚುವುದನ್ನು ಸರ್ಕಾರ ತಪ್ಪಿಸಿದೆ ಎಂದರು.
ಪ್ರತಿ ಮನೆಯ ಗೃಹಲಕ್ಷ್ಮೀಯರ ಖಾತೆಗೆ ಮಾಸಿಕ 2 ಸಾವಿರ ರೂ.
ಜಮೆಯಾಗುತ್ತಿರುವುದರಿಂದ ಮಹಿಳೆಯರು ಸ್ವಾವಲಂಬಿಯಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ,
ಆಸ್ಪತ್ರೆ ವೆಚ್ಚ ಮಾತ್ರವಲ್ಲದೆ ಅನೇಕ ಕುಟುಂಬಗಳಿಗೆ ವರದಾನವಾಗಿದೆ. ಸರ್ಕಾರದ ಅವಧಿ
ಇರುವವರೆಗೂ ಗ್ಯಾರಂಟಿ ಯೋಜನೆ ಮುಂದುವರಿಯಲಿದೆ. ಇದರಲ್ಲಿ ಅನುಮಾನ ಬೇಡ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ವಿಶ್ವದ ಪ್ರಭಾವಿ ದೇಶಗಳಿಂದ ಶಹಬಾಸ್‌ಗಿರಿ
ಬಂದಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಪಿ.ಕುಮಾರ ಸ್ವಾಮಿ , ಬಸ್ ಚಾಲಕ ರವಿಶಂಕರ್, ನಿರ್ವಾಹಕ ಕಲ್ಲೇಶ್
ಮತ್ತು ಮೂವರು ಮಹಿಳೆಯರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಬಿ.ಬಿ.ನಿಂಗಯ್ಯ,
ಪಪಂ ಅಧ್ಯಕ್ಷ ಕೆ.ವೆಂಕಟೇಶ್, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಎಂ.ಎ.ಹಂಝ,
ಖುರ್ಷಿದಾ ಭಾನು, ನಾಮ ನಿರ್ದೇಶಿತ ಸದಸ್ಯರಾದ ಸಿ.ಬಿ.ಶಂಕರ್ ಬಿ.ಕೆ.ಜಯಮ್ಮ,
ಇತರರಿದ್ದರು.