ಕಡೂರಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು. ಅಧ್ಯಕ್ಷ ಕೆ.ಆರ್.ಕೃಷ್ಣಮೂರ್ತಿ, ರುದ್ರಪ್ಪ, ರಂಗನಾಥ್, ಈಶ್ವರಪ್ಪ ಮತ್ತಿತರಿದ್ದರು. 
ಜಿಲ್ಲೆ

ಸಹಕಾರ ಸಂಘಗಳಿಂದ ಸ್ವಾವಲಂಬನೆಯ ಬದುಕು

ಜಿ.ಹೆಚ್. ಧನ್ಯಕುಮಾರ್

ಕಡೂರು: ರೈತರು ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳುವಲ್ಲಿ ಸಹಕಾರ ಸಂಘಗಳು ಮಹತ್ತರ ಪಾತ್ರ ವಹಿಸಲಿವೆ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.
ಕಡೂರಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶನಿವಾರ ನಡೆದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಷೇರುದಾರರ ಸಹಕಾರ ಮತ್ತು ಆಡಳಿತ ಮಂಡಳಿ ಪರಿಶ್ರಮದಿಂದ ಸಂಘ 14.5 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದರು.
ತಾಲೂಕಿನ ಐದು ಗ್ರಾಪಂಗಳ ವ್ಯಾಪ್ತಿ ಹೊಂದಿರುವ ಸಂಘ ಸಹಕಾರಿ ರಂಗದಲ್ಲಿ ಉತ್ತಮ ಕಾರ್ಯವೈಖರಿಯಿಂದ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಹೆಸರುಗಳಿಸಿದೆ. ಸುಮಾರು 3 ಸಾವಿರ ಸದಸ್ಯರನ್ನು ಹೊಂದಿದ್ದು, 900 ಸದಸ್ಯರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗಿದೆ. ವಾರ್ಷಿಕವಾಗಿ 35 ಕೋಟಿಗೂ ಹೆಚ್ಚು ವಹಿವಾಟು ನಡೆಸಲಿದೆ. ವರ್ಷದಿಂದ ವರ್ಷಕ್ಕೆ ಲಾಭಂಶ ಹೆಚ್ಚಿಸಿಕೊಳ್ಳಲಾಗುತ್ತಿದೆ. ಸಂಘದಿಂದ ವಿಸ್ತಾರವಾದ ಗೋದಾಮು ನಿರ್ಮಿಸಿದ್ದು, ಅದಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮೂರು ಲಕ್ಷ ರೂ. ಅನುದಾನ ನೀಡಿದ್ದರು ಎಂದರು.
ಅಧ್ಯಕ್ಷ ಕೆ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಂಘದಿಂದ ರೈತರಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರ್ಥಿಕವಾಗಿ ಸಧೃಡಗೊಳ್ಳಲು ರೈತರುಗಳು ಸಹಕಾರಿ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರನಾಯ್ಕ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ರುದ್ರಪ್ಪ, ನಿರ್ದೇಶಕರಾದ ಈಶ್ವರಪ್ಪ, ದ್ರಾಕ್ಷಾಯಣಮ್ಮ, ಬಳ್ಳೇಕೆರೆ ವಿಶ್ವನಾಥ್, ರಂಗನಾಥ್, ರಾಜಪ್ಪ, ನಿರ್ಮಾಲ, ಕಡೂರಹಳ್ಳಿ ಪ್ರಶಾಂತ್, ತೇಜರಾಜು ಮತ್ತಿತರಿದ್ದರು.