ಗೋಕರ್ಣ: ನಮ್ಮ ಸ್ವಭಾಷೆಯಂತೆ ಹಬ್ಬ-ಉತ್ಸವಗಳ ಆಚರಣೆಗಳೂ ಕಲುಷಿತಗೊಂಡಿವೆ. ಸಂಸ್ಕೃತಿಯ ಹೆಸರಿನಲ್ಲಿ ಇಂದು ನಡೆಯುತ್ತಿರುವ ವಿಕೃತಿಗಳಿಗೆ ಕಡಿವಾಣ ಹಾಕುವ ತ್ವರಿತ ಅಗತ್ಯ ಎದುರಾಗಿದೆ. ಸ್ವಭಾಷೆ ಮತ್ತು ಸ್ವಯಮಾಚರಣೆಗಳಲ್ಲಿ ಮೆರೆಯುತ್ತಿರುವ ವಿವಿಧ ವಿಕೃತಿಗಳಿಂದಾಗಿ ಬದುಕಿನ ಶಾಶ್ವತ ಸುಖದ ಹಾದಿಯಿಂದ ವಂಚಿತರಾಗಿದ್ದೇವೆ ಎಂದು ಇಲ್ಲಿನ ಅಶೋಕೆಯಲ್ಲಿ 32ನೇ ಸ್ವಭಾಷಾ ಚಾತುರ್ವಸ್ಯದಲ್ಲಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ 50ನೇ ದಿನವಾದ ಗುರುವಾರ ಶ್ಯಾಮಸೂರ್ಯ ಮುಳಿಗದ್ದೆ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವದಿಸಿದರು.
ನಮ್ಮ ಸ್ವಭಾಷೆ ತಾಯಿ ಸರಸ್ವತಿಯ ಪರಿಶುದ್ಧರೂಪ. ಅನ್ಯಭಾಷಾ ಪದಗಳ ಪ್ರವೇಶದಿಂದ ಇಂದು ಮಲಿನಗೊಂಡ ಈ ಪರಿಶುದ್ಧರೂಪದ ಶುದ್ಧೀಕರಣ ವಸ್ತುತಃ ವಾšಯ ತಪಸ್ಸು. ಇದೇ ಬಗೆಯಲ್ಲಿ ಹಬ್ಬ ಉತ್ಸವಗಳ ಆಚರಣೆ ಗಳು ಅಶುದ್ಧಗೊಂಡಿರುವುದಕ್ಕೆ ಇಂದು ಆಚರಿತವಾಗುತ್ತಿರುವ ಗೌರಿ ಗಣೇಶ ಹಬ್ಬ ಜ್ವಲಂತ ನಿದರ್ಶನ. ಭಕ್ತಿ ಭಾವಗಳ ಗಣೇಶನ ಆರಾಧನೆ ಅಪಹಾಸ್ಯದ ವಸ್ತುವಾಗಿದೆ. ಪುರಾಣ-ಶಾಸ್ತ್ರಕ್ಕೆ ವಿರೋಧವಾಗಿ, ಒಪ್ಪಿತವಲ್ಲದ ನಾನಾ ವೇಷ-ಭಂಗಿಗಳಲ್ಲಿ ಗಣೇಶ ಮೂರ್ತಿಯ ನಿರ್ಮಾಣ ಮಾಡಲಾಗುತ್ತಿದೆ. ಬಣ್ಣದ ಹೆಸರಿನಲ್ಲಿ ಧೂಮ್ರವರ್ಣನಿಗೆ ವಿಷ ಬಳಿಯಲಾಗುತ್ತಿದೆ. ಚಾತುರ್ವಸ್ಯ ದಾರಿ ತೋರುವ ಗುರು ಮತ್ತು ವಿಘ್ನವಿನಾಶಕ ಗಣಾಧಿಪ ಸಾನ್ನಿಧ್ಯದ ಅಪರೂಪದ ಸಂಯೋಗ. ಇಂತಹ ಸುಯೋಗ ಸಂಸ್ಕೃತಿಯನ್ನು ವಿಕೃತಿಗೊಳಿಸುವ ಮೆರೆದಾಟದಿಂದ ಮಹಾಗಣೇಶ ಖಂಡಿತಕ್ಕೂ ಸಂತುಷ್ಟನಾಗಲಾರ. ಕಾರಣ ನಮ್ಮ ಸ್ವಭಾಷಾ, ಸ್ವದೇಶ ಮತ್ತು ಸ್ವಭೂಷಾ ಚಿಂತನೆಗಳ ಮೂಲಕ ಸರ್ವತ್ರ ಶುದ್ಧೀಕರಣ ಆಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಟಿಕೆಟ್ ಬೇಡ: ಗುರುವಾರ ಇಂಗ್ಲಿಷ್ನ ಟಿಕೆಟ್ ಪದ ಕೈಬಿಡಲು ಶ್ರೀಗಳು ಸೂಚಿಸಿ ಅದರ ಜಾಗದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಚೀಟಿ ಪದವನ್ನು ಪ್ರಸಾರ ಮತ್ತು ಪ್ರಚಾರಕ್ಕೆ ತರುವಂತೆ ಸಲಹೆಯಿತ್ತರು. ಶ್ರೀ ಶಂಕರ ಗುರುವರ್ಯರ ಆದಿಯಾಗಿ ಗುರುಪರಂಪರೆಯ ಪ್ರೀತ್ಯರ್ಥ ಆಚರಿತವಾದ ಲಕ್ಷ ತುಳಸಿ ಅರ್ಚನೆಯಲ್ಲಿ ಮಂಗಳೂರು ಹೋಬಳಿಯ ಶಿಷ್ಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಪನ್ನಗೊಳಿಸಿರುವುದಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸಭೆಯಲ್ಲಿ ಶಾಸನತಂತ್ರ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಚಾತುರ್ವಸ್ಯ ಬಳಗದ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಪದಾಧಿಕಾರಿಗಳಾದ ಈಶ್ವರಪ್ರಸಾದ, ಕೃಷ್ಣಮೂರ್ತಿ ಮಾಡಾವು, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ರಮೇಶ ಭಟ್ಟ ಸರವು, ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಕೆರೆಮೂಲೆ ಸುಬ್ರಹ್ಮಣ್ಯ ಭಟ್ಟ, ಅರವಿಂದ ಧರ್ಬೆ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ವಿಷ್ಣು ಬನಾರಿ ಉಪಸ್ಥಿತರಿದ್ದರು.