ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮೀನಿನ ಮೌಲ್ಯವರ್ಧನೆ ಮೂಲಕ ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಹೇಳಿದರು.
ಹೈದರಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹಾಗೂ ಬೀದರ್‌ನ ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಹೆಬ್ಬಾಳದ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೀನಿನ ಮೌಲ್ಯವರ್ಧನೆಯಲ್ಲಿ ಮಹಿಳಾ ಸಬಲೀಕರಣ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಹಿಳಾ ಸ್ವಾವಲಂಬಿ ಜೀವನಕ್ಕೆ ಕಿರು ಉದ್ದಿಮೆಗಳು ಸಹಕಾರಿಯಾಗಲಿವೆ. ಮೀನಿನ ಮೌಲ್ಯವರ್ಧನೆಯೊಂದಿಗೆ ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಮತ್ತು ಇದರಿಂದ ಕಿರು ಉದ್ದಿಮೆದಾರರಾಗಿ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಇಲಾಖೆಯ ಮೂಲಕ ಹಲವು ಯೋಜನೆಗಳೊಂದಿಗೆ ಮೌಲ್ಯವರ್ಧನೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಮೀನುಗಾರಿಕಾ ಉಪನಿರ್ದೇಶಕ ಚಿಕ್ಕಣ್ಣ ತಿಳಿಸಿದರು. ಹೆಸರಘಟ್ಟದ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ಎನ್.ಮಂಜಪ್ಪ ಅವರು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಕಿರು ಉದ್ದಿಮೆಗೆ ನೆರವು ದೇವನಹಳ್ಳಿ ತಾಲೂಕು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗೇಂದ್ರಬಾಬು ಇಲಾಖೆಯ ಸವಲತ್ತುಗಳು ಹಾಗೂ ಇಲಾಖೆಯ ಹಣಕಾಸು ಸಹಾಯದ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀನುಗಾರಿಕಾ ಉಪನಿರ್ದೇಶಕ ಎಸ್.ಆರ್.ನಾಗರಾಜು ಇಲಾಖೆಯಿಂದ ಮಹಿಳೆಯರಿಗೆ ಕಿರು ಉದ್ದಿಮೆ ಸ್ಥಾಪಿಸಲು ನೆರವು ನೀಡುವುದಾಗಿ ತಿಳಿಸಿದರು.