ತೇರದಾಳ: ಅನಾರೋಗ್ಯ ಪೀಡಿತರಿಗೆ ಉತ್ತಮ ಚಿಕಿತ್ಸೆಯೊಂದಿಗೆ ಆತ್ಮಸ್ಥೈರ್ಯ ನೀಡುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ವೈದ್ಯರು ಧೈರ್ಯ ತುಂಬುವ ಮೂಲಕ ಗುಣಪಡಿಸಲು ಶ್ರಮಿಸಬೇಕು. ಬಹುತೇಕ ರೋಗಗಳಿಗೆ ಔಷಧೋಪಚಾರ ಸಂಶೋಧಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜೆವಿಎಂ ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಡಾ. ಜೆ.ಬಿ. ಆಲಗೂರ ಹೇಳಿದರು.
ಪಟ್ಟಣದ ಗುರುಕುಲ ಆವರಣದಲ್ಲಿರುವ ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ಷಯ ರೋಗ ಮತ್ತು ಎಚ್‌ಐವಿ ನಿಯಂತ್ರಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರೋಗಗಳು ಬರುವ ಮುನ್ನವೇ ಎಚ್ಚರಿಕೆ ವಹಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಾಗಿದೆ. ವೈದ್ಯರಿಗೆ ಹಣವೇ ಮುಖ್ಯವಾಗದೆ ಸೇವಾ ಮನೋಭಾವವಿರಬೇಕು ಎಂದರು.
ಜಿಲ್ಲಾ ಕ್ಷಯರೋಗ ತಜ್ಞೆ ಡಾ. ಸುವರ್ಣಾ ಕುಲಕರ್ಣಿ ಉಪನ್ಯಾಸ ನೀಡಿದರು. ಡಿ.ಆರ್. ಪಾಟೀಲ, ಪ್ರಾಚಾರ್ಯ ಡಾ.ಎಲ್.ಎಂ. ಬಿರಾದಾರ ಮಾತನಾಡಿದರು. ಡಾ.ಶರಣಬಸವೇಶ್ವರ ನುಚ್ಚಿ, ಡಾ.ಸೌಭಾಗ್ಯಾ ಮಠಪತಿ ಹಾಗೂ ಸುತ್ತಮುತ್ತಲಿನ ವೈದ್ಯರು ಉಪಸ್ಥಿತರಿದ್ದರು.