ಧಾರವಾಡ: ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜೆವಿಎಸ್) ರಾಜ್ಯ ಸಮಿತಿ ಸದಸ್ಯರಾಗಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿಕ್ಷಕ ಎಲ್.ಐ. ಲಕ್ಕಮ್ಮನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ಇತ್ತೀಚೆಗೆ ಜರುಗಿದ ಬಿಜೆವಿಎಸ್ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶುಭಂಕರ ಚಕ್ರವರ್ತಿ ತಿಳಿಸಿದ್ದಾರೆ.
ಎಲ್. ಐ. ಲಕ್ಕಮ್ಮನವರ ಸುಮಾರು 25 ವರ್ಷಗಳಿಂದ ಬಿಜೆವಿಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಂಪೂರ್ಣ ಸಾಕ್ಷರತಾ ಆಂದೋಲನ, ಮುಂದುವರಿಕೆ ಶಿಕ್ಷಣ, ಕನ್ನಡ ನಾಡು ಸಾಕ್ಷರ ನಾಡು ಯೋಜನೆಗಳಲ್ಲಿ ಕ್ಷೇತ್ರ ಸಂಯೋಜಕರಾಗಿ, ತಾಲೂಕು ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ನಗರದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಅಧ್ಯಕ್ಷರಾಗಿ ಹತ್ತು ಹಲವು ಶೈಕ್ಷಣಿಕ ಹಾಗೂ ವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ನೆರವೇರಿಸಿದ್ದಾರೆ.