ಜಿಲ್ಲೆ

ಉತ್ತರ ಪರ್ವಕ್ಕೆ ಜಿಲ್ಲೆಯ 3 ಕೃತಿ ಆಯ್ಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ವೀರಲೋಕ ಪ್ರಕಾಶನವು ಉತ್ತರ ಪರ್ವ ಪ್ರಧಾನ ಶೀರ್ಷಿಕೆಯಡಿ ವಿಶೇಷವಾಗಿ ಉತ್ತರ ಕರ್ನಾಟಕ ಲೇಖಕರನ್ನೇ ಕೇಂದ್ರೀಕರಿಸಿ ಮೊದಲ ಹಂತದಲ್ಲಿ ಪ್ರಕಟಣೆಗೆ ಆಯ್ಕೆಯಾದ 10 ಲೇಖಕರ ಕೃತಿಗಳಲ್ಲಿ ಜಿಲ್ಲೆಯ 3 ಕೃತಿಗಳು ಆಯ್ಕೆಯಾಗಿವೆ.
ಧಾರವಾಡದ ಶ್ರೀಧರ ಗಸ್ತಿ ಅವರ "ಚಂದ್ರಾ ಲೇ-ಔಟ್​', ಹುಬ್ಬಳ್ಳಿಯ ಕವಿತಾ ಹೆಗಡೆ ಅಭಯಂ ಅವರ "ಇತ್ತ ಹಾಯಲಿ ಚಿತ್ತ' ಹಾಗೂ ಕುಂದಗೋಳದ ಸಿ.ವಿ. ವಿರೂಪಾಕ್ಷ ಅವರ "ಖದೀಜಾ' ಕೃತಿಗಳು ಆಯ್ಕೆಯಾಗಿವೆ.
ಉ.ಕ. ಭಾಗದ ಇತರೇ ಜಿಲ್ಲೆಗಳ ಕೃತಿಗಳು : ಶೇಕ್ಷಾವಲಿ ಮಣಿಗಾರ (ಕೃತಿ- "ಆ ವದನ'), ಡಾ. ಸದಾಶಿವ ದೊಡಮನಿ(ಇರುಳ ಬಾಗಿಲಿಗೆ ಕಣ್ಣ ದೀಪ), ನವ್ಯ ಕತ್ತಿ (ಮಾಯಾ ಗುಹೆ), ಪ್ರಕಾಶ ಗಿರಿಮಲ್ಲನವರ (ಜನನಾಯಕ), ಮರ್ತುಜಾಬೇಗಂ ಕೊಡಗಲಿ, ಬಿ.ಜೆ. ಪಾರ್ವತಿ ವಿ. ಸೋನಾರೆ (ಓಡಿ ಹೋದಾಕಿ), ರವೀಂದ್ರ ಮುದ್ದಿ (ವರದಾ ತೀರದ ಕಥೆಗಳು). ಈ ಹತ್ತೂ ಕೃತಿಗಳು ಈಗ ಮುದ್ರಣಗೊಂಡಿವೆ. ಆಯ್ಕೆ ಬಯಸಿ ಬಂದಿದ್ದ ನೂರಕ್ಕೂ ಹೆಚ್ಚು ಕೃತಿಗಳಲ್ಲಿ ರಾಜಶೇಖರ ಮಠಪತಿ(ರಾಗಂ) ನೇತೃತ್ವದ ಆಯ್ಕೆ ಸಮಿತಿ ಈ ಕೃತಿಗಳನ್ನು ಅಂತಿಮಗೊಳಿಸಿದೆ.
ಈ 10 ಕೃತಿಗಳು ಆ. 4ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್​ ಸಭಾಭವನದಲ್ಲಿ ಬಿಡುಗಡೆಯಾಗಲಿವೆ. ಅತಿಥಿಗಳಾಗಿ ನಿರ್ದೇಶಕ ಬಿ.ಸುರೇಶ, ಹಿರಿಯ ಸಾಹಿತಿ ರಾಜಶೇಖರ ಮಠಪತಿ(ರಾಗಂ), ಮಧು ವೈ.ಎನ್​, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಪಾಲ್ಗೊಳ್ಳಲಿದ್ದಾರೆ ಎಂದು ವ್ಯವಸ್ಥಾಪಕ ಅನಂತ ಕುಣಿಗಲ್​ ತಿಳಿಸಿದ್ದಾರೆ.