ನಾಲತವಾಡ: ನಾಗಬೇನಾಳ ಗ್ರಾ.ಪಂ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಬಸವ ವಸತಿ ಯೋಜನೆಯ ಹೆಚ್ಚುವರಿ 119 ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವ ಆವಾಸ್ ಯೋಜನೆಯ 41ಮನೆಗಳನ್ನು ಚಪ್ಪಾಳೆ ತಟ್ಟುವ ಮೂಲಕ ವಾದ ವಿವಾದಗಳ ಮದ್ಯೆಯೂ ಒಮ್ಮತದಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
2021-22ನೇ ಸಾಲಿನಲ್ಲಿ 119 ಫಲಾನುಭವಿಗಳು ಆಯ್ಕೆಯಾಗಿದ್ದರು, ಗ್ರಾಪಂನಿಂದ ಫಲಾನುಭವಿಗಳ ಪೂರಕ ದಾಖಲೆಗಳನ್ನು ತಾಪಂಗೆ ಸಲ್ಲಿಸದ ಪರಿಣಾಮ ಅನುಮೋದನೆ ವಿಳಂಬಗೊಂಡಿತ್ತು. ಆದ್ದರಿಂದ ಮತ್ತೆ ಮಂಜೂರಾದ 41ಮನೆಗಳ ಲಾನುಭವಿಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಬಹು ಮುಖ್ಯ. ವಸತಿ ಯೋಜನೆಗಳಡಿ ಮಂಜೂರಾದ ಸುಮಾರು 160 ಮನೆಗಳನ್ನು ತಮ್ಮ ಅಭಿಪ್ರಾಯ ಸಂಗ್ರಹಿಸಿ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿದ್ದೇವೆ ಇದಕ್ಕೆ ಸಾಕ್ಷಿಯಾಗಿ ತಾವು ಚಪ್ಪಾಳೆ ಮೂಲಕ ಸಮ್ಮತಿಸಿದ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದೇವೆ, ಇಷ್ಟಾದರೂ ತಂಟೆ ತಕರಾರು ಮಾಡಿದ್ದಲ್ಲಿ ಎಲ್ಲಾ ಲಾನುಭವಿಗಳ ಆಯ್ಕೆ ರದ್ದುಗೊಳಿಸುವ ಅಧಿಕಾರ ಹೊಂದಿದ್ದು, ಹಾಗಾಗದಂತೆ ಎಚ್ಚರವಹಿಸಿ ಎಂದು ವಸತಿ ನಿಗಮದ ನಾಗರಾಳಮಠ, ತಾ.ಪಂ ಎಡಿ ಪಿ.ಎಸ್. ಕಸನಕ್ಕಿ ಹಾಗೂ ಪಿಡಿಓ ಮುರಿಗೆಮ್ಮ ಪೀರಾಪೂರ ಮನವಿ ಮಾಡಿಕೊಂಡರು.
ನಾಗಬೇನಾಳದ ಗ್ರಾಪಂಗೆ ಕರ ತುಂಬುವಲ್ಲಿ ಸಮೀಪದ ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದವರು ಗೋಲ್‌ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಯುವ ಜನ ಸೇನೆಯ ನಾಲತವಾಡದ ಶಿವಾನಂದ ವಾಲಿಯವರು ಮಾಡಿದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು. 110 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿರುವ ಮುರುಡೇಶ್ವರ ವಿದ್ಯುತ್ ಘಟಕದಿಂದ ವಸೂಲಾಗಬೇಕಾದ ಕರದ ಬಗ್ಗೆ ಮಾಹಿತಿ ಒದಗಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಕಂಪನಿಗೆ ಈಗಾಗಲೇ ಭೇಟಿ ನೀಡಿದ್ದು, ಒಂದು ಮೆಗಾವ್ಯಾಟ್‌ಗೆ ತುಂಬಬೇಕಾದ ಕರದ ವಿವರ ಕೇಳಿ ನೋಟಿಸ್ ಕೊಡುತ್ತೇವೆ ಎಂದರು.
ಶಿವರುದ್ರಯ್ಯ ಹಿರೇಮಠ, ಸಂಗಣ್ಣ ಡಂಬಳ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಕಾಜಗಾರ, ಉಪಾಧ್ಯಕ್ಷೆ ಹೇಮಾ ವಾಲಿಕಾರ, ಭೀಮಣ್ಣ ರಕ್ಕಸಗಿ, ಗದ್ದೆಪ್ಪ ಗೌಂಡಿ, ಬಸಮ್ಮ ಗೌಂಡಿ ಮತ್ತಿತರರಿದ್ದರು.