ಹುಬ್ಬಳ್ಳಿ : ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಧುನಿಕ ಕಲಿಕಾ ಸಾಮಗ್ರಿಗಳು, ಉತ್ತಮ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಪಿಎಂಶ್ರೀ ಯೋಜನೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಧಾರವಾಡ ಜಿಲ್ಲೆಯ 12 ಹಾಗೂ ಶಿಗ್ಗಾಂವಿ, ಸವಣೂರು ತಾಲೂಕಿನ 3 ಶಾಲೆಗಳೂ ಸೇರಿದಂತೆ ಒಟ್ಟು 15 ಶಾಲೆಗಳು ಆಯ್ಕೆಯಾಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
‘ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ ಹೆಸರಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಯ ಲಾಭ ಧಾರವಾಡ ಜಿಲ್ಲೆಗೆ ಈಗಾಗಲೇ ತಲುಪಿದೆ. ಜಿಲ್ಲೆಯ ಒಟ್ಟು 15 ಶಾಲೆಗಳು ಹೊಸ ರಾಷ್ಟಿ್ರಯ ಶಿಕ್ಷಣ ನೀತಿಗೆ ಅನುಗುಣವಾಗಿ ಮಾದರಿಯಾಗಲಿವೆ ಎಂದು ಸಚಿವ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 245 ಶಾಲೆಗಳನ್ನು ಈ ಯೋಜನೆಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕುಂಬಾರಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧಾರವಾಡ ತಾಲೂಕಿನ ಲೋಕೂರು ಆರ್.ಎಂ.ಎಸ್.ಎ. ಶಾಲೆ ಹಾಗೂ ಮಮ್ಮಿಗಟ್ಟಿ ಗ್ರಾಮದ ಆರ್.ಎಂ.ಎಸ್.ಎ. ಶಾಲೆ, ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಜಿ.ಎಂ.ಪಿ.ಎಸ್. ಶಾಲೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಿರಿಯ ಉರ್ದು ಮಾಧ್ಯಮಿಕ ಶಾಲೆ, ಕಲಘಟಗಿ ತಾಲೂಕಿನ ಬೀರವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಸಕರ ಮಾದರಿ ಪ್ರೌಢಶಾಲೆ, ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ, ನವಲಗುಂದ ತಾಲೂಕಿನ ಮೊರಬ ಗ್ರಾಮದ ಮಾದರಿ ಸರ್ಕಾರಿ ನಂ. 1, ಹಾಗೂ ನವಲಗುಂದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗಳೂ ಸೇರಿದಂತೆ ಒಟ್ಟು 12 ಶಾಲೆಗಳು ಈ ಯೋಜನೆಗೆ ಆಯ್ಕೆಯಾಗಿವೆ ಎಂದು ವಿವರಿಸಿದ್ದಾರೆ.
ಜಿಲ್ಲೆಯಿಂದ ಪಿಎಂಶ್ರೀ ಯೋಜನೆಯ ಆಯ್ಕೆಗೆ ಹೆಚ್ಚುವರಿ ಶಾಲೆಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ ನಾಲ್ಕು ಶಾಲೆಗಳನ್ನು ಗುರುತಿಸಿದ್ದು, ಎರಡನೇ ಹಂತದಲ್ಲಿ 15 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಮೂಲಸೌಕರ್ಯ, ಗುಣಮಟ್ಟದ ಬೋಧನೆ, ಕಲಿಕಾ ಉಪಕರಣಗಳು ಸೇರಿದಂತೆ ಮಾದರಿಯಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಇದರೊಂದಿಗೆ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರುಬದ್ನಿ ಗ್ರಾಮದ ಆರ್.ಎಂ.ಎಸ್.ಎ. ಪ್ರೌಢಶಾಲೆ, ಸವಣೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2, ಹಾಗೂ ಶಿಗ್ಗಾವಿ ತಾಲೂಕಿನ ಹುಲಗೂರು ಗ್ರಾಮದ ಆರ್.ಎಂ.ಎಸ್.ಎ. ಪ್ರೌಢಶಾಲೆಗಳು ಆಯ್ಕೆಯಾಗಿವೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.