ಬೇಲೂರು: ತಾಲೂಕಿನ ಚಿಕ್ಕಮೇದೂರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಶಾಂತೇಗೌಡ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೌಮ್ಯಾ 7 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚಿಕ್ಕಮೇದೂರು ಗ್ರಾಮ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷ ಬಸವರಾಜು ಮತ್ತು ಉಪಾಧ್ಯಕ್ಷೆ ವನಜಾಕ್ಷಿ ಅವರ ರಾಜೀನಾಮೆಯಿಂದ ತೆರವಾದ ಎರಡು ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಾಂತೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ಹಾಗೂ ಪಲ್ಲವಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು, ಸೌಮ್ಯ 7 ಮತಗಳು, ಪಲ್ಲವಿ 6 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿದ್ದ ತಾಪಂ ಇಒ ವಸಂತ ಕುಮಾರ್, 1 ಮತ ಹೆಚ್ಚಿಗೆ ಪಡೆದ ಸೌಮ್ಯಾ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ನೂತನ ಅಧ್ಯಕ್ಷರಾಗಿರುವ ಸಾಂತೇಗೌಡ ಅವರು ಮಾಜಿ ಪ್ರದಾನಿ ದೇವೇಗೌಡರ ಕಾಲದಿಂದಲೂ ಕೆಲಸ ಮಡಿದವರು. ಅವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಅವರು ಸಮಾಜಮುಖಿಯಾಗಿ ಪಂಚಾಯಿತಿ ವ್ಯಾಪ್ತಿಯ ಕುಂದು ಕೊರತೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕೆಲಸ ಮಡಲಿ. ನಾವು ಅವರೊಂದಿಗಿರುತ್ತೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಜೆಡಿಎಸ್ ಹೋಬಳಿ ಅಧ್ಯಕ್ಷ ನವೀನ್, ಗ್ರಾಪಂ ಮಾಜಿ ಅಧ್ಯಕ್ಷ ಮಧುಗೌಡ, ನಾಗೇಶ್, ಸದಸ್ಯರಾದ ಬಸವರಾಜ್, ಗಾನವಿ, ರಾಜು, ಲೋಕೇಶ್, ಪಾರ್ವತಮ್ಮ, ಹೂವಮ್ಮ, ಪಲ್ಲವಿ, ವನಜಾಕ್ಷಿ, ಪುಟ್ಟಮ್ಮ, ಕಲ್ಯಾಣ ಪ್ರಸಾದ್, ವೆಂಕಟೇಶ್, ಅಭಿವೃದ್ಧಿ ಅಧಿಕಾರಿ ಸಂತೋಷ್, ಕಾರ್ಯದರ್ಶಿ ಹರ್ಷಿತಾ ಇತರರು ಇದ್ದರು.