ಬೆಂಗಳೂರು: ಸೆಲ್ಕೋ ಇಂಡಿಯಾದ 2023ನೇ ಸಾಲಿನ 'ಸೂರ್ಯಮಿತ್ರ' ವಾರ್ಷಿಕ ಪ್ರಶಸ್ತಿಗೆ ಅಮೆರಿಕದ ಸೌರ ವಿದ್ಯುತ್ ಪ್ರವರ್ತಕ ರಿಚರ್ಡ್ ಹ್ಯಾನ್ಸೆನ್ ಆಯ್ಕೆಯಾಗಿದ್ದಾರೆ. ಮಲ್ಲೇಶ್ವರದ ವೈಯಾಲಿಕಾವಲ್ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 27ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ರಿಚರ್ಡ್ ಹ್ಯಾನ್ಸೆನ್ ಅವರು ಪ್ರಸ್ತುತ ಎನರ್ಜಿ ಅಕ್ಸೆಸ್ ಫೌಂಡೇಷನ್ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುವ ಉದ್ದೇಶದಿಂದ 1993ರಲ್ಲಿ ರಿಚರ್ಡ್ ಸೋಲುಜ್ ಇಂಕ್ ಎಂಬ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದ್ದಾರೆ.
ಅಭಿವೃದ್ಧೀಶಿಲ ರಾಷ್ಟ್ರಗಳ ಗ್ರಾಮೀಣ ಪ್ರದೇಶದಲ್ಲಿ ಸೌರ ವಿದ್ಯುತ್ ಸೌಲಭ್ಯ ಹೆಚ್ಚಿಸಲು ಹಾಗೂ ಆಧುನಿಕ ಫೋಟೊ ವೋಲ್ಟಾಯಿಕ್ (ಪಿವಿ) ತಂತ್ರಾನವನ್ನು ಕಿರು ಹಣಕಾಸು ಸಂಸ್ಥೆಗಳ ಮೂಲಕ ಪ್ರಸರಿಸುವಲ್ಲಿ ರಿಚರ್ಡ್ ಹ್ಯಾನ್ಸೆನ್ ಸಲ್ಲಿಸಿರುವ ಸೇವೆ ಪರಿಗಣಿಸಿ "ಸೂರ್ಯಮಿತ್ರ' ಪ್ರಶಸ್ತಿ ನೀಡಲಾಗಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.