ಇಳಕಲ್ಲದಲ್ಲಿ ನಗರಸಭೆ ಅಧಿಕಾರಿಗಳು ವಶಕ್ಕೆ ಪಡೆದ ಪಿಒಪಿ ಗಣೇಶ ಮೂರ್ತಿಗಳು. 
ಜಿಲ್ಲೆ

ಇಳಕಲ್ಲ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಶ

ಇಳಕಲ್ಲ: ನಗರದ ಕಾಯಿಪಲ್ಲೆ ಮಾರುಕಟ್ಟೆ ಹತ್ತಿರದ ಬಸವಣ್ಣನ ಗುಡಿಯ ಆವರಣದಲ್ಲಿ ಮಾರಾಟಕ್ಕಿಟ್ಟಿದ್ದ ಪಿಒಪಿ ಗಣೇಶ ಮೂರ್ತಿಗಳನ್ನು ನಗರಸಭೆ ಸಿಬ್ಬಂದಿ ಗುರುವಾರ ವಶಕ್ಕೆ ಪಡೆದು ಬೇರೆಡೆ ಸಾಗಿಸಿದರು.

ಪ್ಲಾಸ್ಟರ್ ಆ್ ಪ್ಯಾರಿಸ್ (ಪಿಒಪಿ) ನಿಂದ ನಿರ್ಮಿಸಲಾದ ಗಣೇಶ ಮೂರ್ತಿಗಳ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ಗಣೇಶ ಮೂರ್ತಿಗಳ ತಯಾರಕರ ಸಭೆ ಕರೆದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಆದರೂ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದರಿಂದ ಸಿಬ್ಬಂದಿ ಮೂರ್ತಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ ಎಂದು ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ ತಿಳಿಸಿದರು.

ನಗರಸಭೆ ಪರಿಸರ ಇಂಜಿನಿಯರ್ ಆನಂದ ಬದಿ, ಆರೋಗ್ಯ ನಿರೀಕ್ಷಕ ಪ್ರಭಾಕರ ತೇಲಿ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಮೂರ್ತಿಗಳನ್ನು ವಶಕ್ಕೆ ಪಡೆದರು.

ನಗರದಲ್ಲಿ ಪಿಒಪಿಯಿಂದ ನಿರ್ಮಿಸಲಾದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದು ಹಾಗೂ ಮಾರಾಟ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.