ಸೇಡಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಪ್ರಕಾಶನ ಟ್ರಸ್ಟ್ನಿಂದ ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ ಅವರಿಗೆ ಸಂಸ್ಕೃತಿ ಸಮ್ಮಾನ, ಪುಸ್ತಕೋದ್ಯಮಿ ಬಸವರಾಜ ಕೋನೆಕ್ ಅವರಿಗೆ ಸೀಗೀ ಸಂಸ್ಕೃತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಲಿಂಗರಾಜಪ್ಪ ಅಪ್ಪ, ಡಾ.ನಾಗರಾಜ ಮನ್ನೆ, ಡಾ.ಲಕ್ಷ್ಮೀಶಂಕರ ಜೋಶಿ, ಸಿದ್ದಪ್ಪ ತಳ್ಳಳ್ಳಿ, ಪ್ರಭಾಕರ ಜೋಶಿ ಇದ್ದರು. 
ಜಿಲ್ಲೆ

ಓದಿನಿಂದ ದೂರಾಗ್ತಿದೆ ಯುವ ಸಮೂಹ

ಸೇಡಂ: ಯುವ ಸಮುದಾಯ ಆಧುನಿಕತೆಗೆ ಮಾರು ಹೋಗುತಿದ್ದು, ಮೊಬೈಲ್, ಟಿವಿ ಚಟದಿಂದಾಗಿ ಓದುವುದನ್ನೆ ಮರೆತಿದೆ ಎಂದು ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಕಳವಳ ವ್ಯಕ್ತಪಡಿಸಿದರು.

ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಪ್ರಕಾಶನ ಟ್ರಸ್ಟ್ನಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಂಸ್ಕೃತಿ ಸಮ್ಮಾನ ಹಾಗೂ ಸೀಗೀ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ನಮ್ಮ ತಂದೆ ಸಾಹಿತ್ಯ ಓದುವುದರಿಂದ ಆಗುವ ಲಾಭದ ಬಗ್ಗೆ ನಮಗೆಲ್ಲ ತಿಳಿಸಿದ್ದರು. ಅದರ ಫಲವಾಗಿ ನಾವು ಆಸಕ್ತಿ ಬೆಳೆಸಿಕೊಂಡು ಓದಿದ್ದೇವೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆ ಮಾತನಾಡಿ, ನಾನು ವೃತ್ತಿಯಿಂದ ವೈದ್ಯನಾಗಿದ್ದರೂ ನನಗೆ ಸಾಹಿತ್ಯದ ಅಲ್ಪಸ್ವಲ್ಪ ನಂಟಿದೆ. ಹಿರಿಯ ಸಾಹಿತಿ ಪ್ರಭಾಕರ ಜೋಶಿ ತಮ್ಮ ಪತ್ನಿಯ ನೆನಪಿಗಾಗಿ ಸೀಗೀ ಸಂಸ್ಕೃತಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಮನೆಗಳಲ್ಲಿ ಪಾಲಕರು ಮಕ್ಕಳಲ್ಲಿ ಸಂಸ್ಕೃತಿ ಬಿತ್ತುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದೆ ಆಪತ್ತು ಎದುರಿಸಬೇಕಾಗುತ್ತದೆ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮೀ ಶಂಕರ ಜೋಶಿ ಮಾತನಾಡಿ, ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತು ಗೀತಾ ಜೋಶಿ ಅವರು ಬದುಕಿನಲ್ಲಿ ಅಕ್ಷರಶಃ ನಿಜವಾಗಿದೆ. ಅಂತಹ ಸಾತ್ವಿಕ ಸ್ವಭಾವದ ಗೃಹಿಣಿಯನ್ನು ಪ್ರಶಸ್ತಿ ರೂಪದಲ್ಲಿ ಶ್ವಾಶತವಾಗಿ ನೆನಪಿಡುವ ಕೆಲಸ ಮಾಡುತ್ತಿರುವ ನಿಜಕ್ಕು ಅನುಕರಣೀಯ ಎಂದು ಹೇಳಿದರು.

ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ ಅವರಿಗೆ ಸಂಸ್ಕೃತಿ ಸಮ್ಮಾನ್ ಹಾಗೂ ಪುಸ್ತಕೋದ್ಯಮಿ ಬಸವರಾಜ ಕೋನೆಕ್ ಅವರಿಗೆ ಸೀಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಸಂಸ್ಕೃತಿ ಪ್ರಕಾಶನ ಟ್ರಸ್ಟ್ನ ಅಧ್ಯಕ್ಷ ಪ್ರಭಾಕರ ಜೋಶಿ ಮಾತನಾಡಿದರು. ಸಂಜೀವ ಸಿರನೂರಕರ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಸೌಮ್ಯ ಜೋಶಿ ಪ್ರಾರ್ಥಿಸಿದರು. ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ಸ್ವಾಗತಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ ವಂದಿಸಿದರು. ಸಾಹಿತಿ ಜಗನ್ನಾಥ ತರನಳ್ಳಿ ನಿರೂಪಣೆ ಮಾಡಿದರು.

ಇಂದು ಪುಸ್ತಕ, ಪತ್ರಿಕೆಗಳಿಂದ ಯುವ ಜನತೆ ದೂರವಾಗುತ್ತಿದ್ದಾರೆ. ಮನುಷ್ಯನಲ್ಲಿ ಜ್ಞಾನ ಹೆಚ್ಚಾಗಬೇಕಾದರೆ ಅಧ್ಯಯನದ ಅವಶ್ಯಕತೆ ಇದೆ. ಅದರಲ್ಲಿಯೂ ಪುಸ್ತಕ ಓದುವುದರಿಂದ ಸಿಗುವ ಜ್ಞಾನ ಇನ್ನೆಲ್ಲಿಯೂ ಸಿಗಲ್ಲ. ಹೀಗಾಗಿ ಇಂದಿನ ಪೀಳಿಗೆ ಪುಸ್ತಕದತ್ತ ಮುಖ ಮಾಡಬೇಕು.
| ಲಿಂಗರಾಜಪ್ಪ ಅಪ್ಪ ಉತ್ತರ ಪ್ರಾಂತ ಅಧ್ಯಕ್ಷ, ವಿಶ್ವ ಹಿಂದು ಪರಿಷತ್