ಜಿಲ್ಲೆ

ಕುಶಾಲನಗರ ತಾಲೂಕಿನ ಐವರು ವಿಜೇತರ ಆಯ್ಕೆ

ಕುಶಾಲನಗರ:

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಓದುಗರಿಗೆ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಕುಶಾಲನಗರ ತಾಲೂಕಿನ ಐವರು ವಿಜೇತರನ್ನು ಕುಶಾಲನಗರ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಲೀಲಾಕುಮಾರಿ ತೊಡಿಕಾನ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಯಾರಿ ವಿಜೇತ ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಸಂಸ್ಥೆಯ ಉಪನ್ಯಾಸಕಿಯರಾದ ಮೇಘನಾ, ಹರ್ಷಿತಾ, ಸೀಮಾ ಹಾಗೂ ಅಶ್ವಿನಿ ಸಾಥ್ ನೀಡಿದರು. ಈ ಸಂದರ್ಭ ಮಾತನಾಡಿದ ಲೀಲಾಕುಮಾರಿ ತೊಡಿಕಾನ, ವಿಜಯವಾಣಿ ಪತ್ರಿಕೆ ಓದುಗರ ನಂ1 ಪತ್ರಿಕೆಯಾಗಿ ಮನೆಮಾತಾಗಿದೆ. ತಾಜಾ ಸುದ್ದಿಗಳೊಂದಿಗೆ ಅತ್ಯುತ್ತಮ ಲೇಖನಗಳು ಓದುಗರ ಜ್ಞಾನದಾಹ ತಣಿಸುವಂತಿರುತ್ತವೆ. ಪದಬಂಧ ಸುಡೊಕುಗಳು ಮೆದುಳನ್ನು ಚುರುಕುಗೊಳಿಸುತ್ತವೆ. ಮಹಿಳೆಯರನ್ನು ಪ್ರಧಾನವಾಗಿಟ್ಟುಕೊಂಡು ಅವರನ್ನು ಉತ್ತೇಜಿಸುವ 'ನಾರಿ ನಿನಗೊಂದು ಸ್ಯಾರಿ' ಯಂಥ ಪರಿಕಲ್ಪನೆಗಳು ಗೃಹಿಣಿಯರಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಸಾಮಾನ್ಯ ಜ್ಞಾನ ಹೆಚ್ಚಳಕ್ಕೂ ಕೊಡುಗೆ ನೀಡುತ್ತದೆ. ಓದುಗರಿಗೆ ಬಹು ಉಪಯುಕ್ತವಾಗುವಂಥ ಯೋಗ ಮತ್ತು ಕ್ರೀಡೆಯ ಬಗ್ಗೆ ಅತ್ಯುತ್ತಮ ಮಾಹಿತಿಗಳು ಪತ್ರಿಕೆ ಮೂಲಕ ದೊರಕುತ್ತದೆ. ಪತ್ರಿಕಾ ಮಾಧ್ಯಮದಲ್ಲಿ ಅತ್ಯುತ್ತಮವಾದ ಸೇವೆಯನ್ನು ನೀಡುವ ಪತ್ರಿಕೆಯಾಗಿ ವಿಜಯವಾಣಿ ಜನಪ್ರಿಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಮಾತನಾಡಿ, ಸಾಮಾಜಿಕ ಜೀವನದಲ್ಲಿ ಮಹಿಳೆಯ ಪಾತ್ರ ಅತ್ಯುನ್ನತ್ತವಾಗಿದೆ. ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿರುವ ಮಹಿಳಾ ವರ್ಗವನ್ನು ಮುನ್ನೆಲೆಗೆ ತರುವ ಕೆಲಸ ಮಾಡಬೇಕು. ಶಿಕ್ಷಣದ ಮೂಲಕ ಮಹಿಳೆಯರನ್ನು ಜ್ಞಾನವಂತರನ್ನಾಗಿ ಮಾಡಲು ಸಾಧ್ಯವಿದೆ. ಮಹಿಳೆಯರು ಪ್ರತಿದಿನ ದಿನದ ಒಂದಷ್ಟು ಸಮಯವನ್ನು ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸಕ್ಕೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು.

ಉಪನ್ಯಾಸಕಿ ಹರ್ಷಿತಾ ಮಾತನಾಡಿ, ನಾರಿ ನಿನಗೊಂದು ಸ್ಯಾರಿ ಯಂಥ ಕಾರ್ಯಕ್ರಮಗಳು ಮಹಿಳೆಯರನ್ನು ಪತ್ರಿಕೆ ಓದಲು ಪ್ರೇರೇಪಿಸುತ್ತದೆ. ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ ದೆಸೆಯಲ್ಲೇ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.