ಗೋಕರ್ಣ: ಇಡೀ ಜಗದ ಜೀವನ ಎನ್ನುವುದು ನಮಗೆ ನಾವೇ ಮಾಡಿಕೊಂಡ ವಿಧವಿಧ ಬಂಧನಗಳ ಜೈಲು. ಕರ್ಮಗಳು ಆ ಜೈಲಿನ ಗೋಡೆಗಳಾದರೆ ಪಾಪ-ಪುಣ್ಯಗಳು ಅಲ್ಲಿರುವ ಸರಳುಗಳು. ಈ ಬಂಧನಗಳ ಜೈಲಿನಿಂದ ಹೊರ ಬರುವುದೇ ನಿಜವಾದ ಸೀಮೋಲ್ಲಂಘನವಾಗಿದೆ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಬುಧವಾರ ಅಶೋಕೆಯ ಶ್ರೀಗುರುದೃಷ್ಟಿ ಭವನದಲ್ಲಿ 31ನೇ ಅನಾವರಣ ಚಾತುರ್ಮಾಸ್ಯ ಸೀಮೋಲ್ಲಂಘನ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಬದುಕಿಗೆ ಸತ್ವ, ತಮೋ ಮತ್ತು ರಜೋ ಗುಣಗಳೇ ಸೀಮೆ. ಈ ತ್ರಿಗುಣಗಳ ಕರ್ಮಚಕ್ರದ ಸೀಮೆಯಿಂದ ಹೊರ ಬಂದು ಮೋಕ್ಷವನ್ನು ಸಾಧಿಸುವುದು ಸೀಮೋಲ್ಲಂಘನ. ಸೀಮೆಯನ್ನು ಉಲ್ಲಂಘಿಸುವುದು ಮತ್ತು ಸೀಮೆಯನ್ನು ಭೇದಿಸುವುದು ಬೇರೆ ಬೇರೆಯಾಗಿದೆ. ಉಲ್ಲಂಘಿಸುವುದು ಸೀಮೆಯನ್ನು ದಾಟುವುದು-ಮೀರುವುದಾದರೆ, ಭೇದಿಸುವುದು ಸೀಮೆಯನ್ನು ಮುರಿಯುವುದು-ಒಡೆಯುವುದಾಗಿದೆ. ಶ್ರೀರಾಮ ಲಂಕೆಗೆ ಹೋಗಿದ್ದು ಸೀಮೋಲ್ಲಂಘನ. ರಾವಣ ಲೋಕ ಸೀಮೆಯ ಮರ್ಯಾದೆಯ ಸೀಮೆಯನ್ನು ಒಡೆದುದಾಗಿದೆ. ಕಾರಣ ಜೀವನದ ಎಲ್ಲ ಸೀಮೆ, ಎಲ್ಲ ಗೋಡೆ ಮತ್ತು ಎಲ್ಲ ಗಡಿಯನ್ನು ಮೀರಿ ನಮ್ಮ ನಮ್ಮ ಕಟ್ಟುಗಳನ್ನು ಬಿಡಿಸಿಕೊಂಡು ಹಕ್ಕಿಯಂತೆ ಆಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸಿ ಗಗನವನ್ನೇ ಸೀಮೆಯಾಗಿಸಿಕೊಳ್ಳುವಂತಾಗಬೇಕು. ಅಂತಹ ಸುಖ-ಭಾಗ್ಯವನ್ನು ರಾಮ ನಿಮಗೆಲ್ಲರಿಗೆ ಕರುಣಿಸಲಿ ಎಂದರು.
ಶಿಷ್ಯಭಕ್ತರೇ ಶೋಭೆ: 60 ದಿನಗಳ ಆಸ್ವಾದನೀಯವಾಗಿ ಸಂಪನ್ನವಾದ ಅನಾವರಣ ಚಾತುರ್ಮಾಸ್ಯಕ್ಕೆ ಮತ್ತು ಸೀಮೋಲ್ಲಂಘನಕ್ಕೆ ಶಿಷ್ಯಭಕ್ತರೇ ನಿಜವಾದ ಶೋಭೆ. ಸುಖ ಯುಗವನ್ನು ಕ್ಷಣವಾಗಿಸಿದರೆ ದುಃಖ ಕ್ಷಣವನ್ನು ಯುಗವಾಗಿಸುತ್ತದೆ. 60 ದಿನಗಳ ಯತಿಗಳ ಪಾಲಿನ ಚಾತುರ್ಮಾಸ್ಯ ನಿಮ್ಮಿಂದಾಗಿ ಯುಗದಂತೆ ದೀರ್ಘ ಎನಿಸದೆ ಒಂದು ಮಹಾ ಹಬ್ಬದಂತಾಗಲು ಕಾರಣವಾಯಿತು. ನಿಮ್ಮಂತಹ ಶಿಷ್ಯಭಕ್ತ ಕಾರ್ಯಕರ್ತರು ಮತ್ತು ದೇವರಿಂದ ಈ ಚಾತುರ್ಮಾಸ್ಯ ಸುವ್ಯವಸ್ಥಿತವಾಗಿ ನಡೆದಿದೆ ಎಂದರು.
ಅನಾವರಣ: ಸೀಮೋಲ್ಲಂಘನದ ನಿಮಿತ್ತ ಕೆಕ್ಕಾರು ಶ್ರೀಮಠದಲ್ಲಿನ ಶ್ರೀರಾಮದೇವರ ಮಹತಿಯನ್ನು ಅನಾವರಣ ಮಾಡಿ ಇಲ್ಲಿರುವ ಪಟ್ಟಾಭಿರಾಮ ಮತ್ತು ಕೆಕ್ಕಾರಿನಲ್ಲಿನ ತಪೋರಾಮ ಆತ್ಮ ಮತ್ತು ದೇಹ ಸಂಬಂಧದಂತೆ. ಅಗಸ್ತ್ಯ ಮಹಾಮುನಿವರರಿಂದ ವರದ ಗುರುವರ್ಯರಿಗೆ ಪ್ರಾಪ್ತವಾದ ಇವೆರಡರ ಮಹತ್ವವನ್ನು ಅರಿತು ಇವುಗಳನ್ನು ಶ್ರೀಮಠದ ಸಮಸ್ತ ಶಿಷ್ಯಭಕ್ತರು ಹೃದಯದಲ್ಲಿ ಧಾರಣೆ ಮಾಡುವಂತಾಗಲಿ ಎಂದರು. ಹತ್ತಿರದ ಜೀವನದಿ ಗಂಗಾಗಳಿ ನದಿಯನ್ನು ದಾಟುವ ಮೂಲಕ ಸೀಮೋಲ್ಲಂಘನ ಕೈಗೊಂಡರು.
ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಸಂಪೂರ್ಣ ಚಾತುರ್ಮಾಸ್ಯವನ್ನು ಸಭೆಯ ಮುಂದಿಟ್ಟು ಇದರ ಸೇವಾಭಾಗಿಗಳಾದ ಸರ್ವರನ್ನು ಅಭಿನಂದಿಸಿದರು. ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ.ಎಲ್., ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮ, ವಿವಿವಿ ಕೇಂದ್ರ ಸಮಿತಿ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್. ಹೆಗಡೆ, ಹವ್ಯಕ ಮಹಾಮಂಡಲ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಪದಾಧಿಕಾರಿಗಳಾದ ಹೇರಂಭ ಶಾಸ್ತ್ರಿ, ಪ್ರಸನ್ನ ಉಡುಚೆ, ಜಿ.ಎಸ್. ಹೆಗಡೆ, ವಿವಿಧ ಮಂಡಲಾಧ್ಯಕ್ಷರಾದ ಸುಬ್ರಾಯ ಭಟ್ಟ ಮೂರೂರು, ಆರ್.ಜಿ.ಹೆಗಡೆ, ಉದಯಶಂಕರ ನೀರ್ಪಾಜೆ, ಕೃಷ್ಣಮೂರ್ತಿ ಮಾಡಾವು, ಚಾತುರ್ಮಾಸ್ಯ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ ಮತ್ತಿತರರಿದ್ದರು. ಪ್ರಶಾಂತ ಹೆಗಡೆ ಮತ್ತು ಬಿಂದು ಅವಧಾನಿ ನಿರ್ವಹಿಸಿದರು.