ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಆರೂರು ಗ್ರಾಮ ಪಂಚಾಯಿತಿಯ 2025- 26ನೇ ಸಾಲಿನ ಮಹಿಳಾ ಗ್ರಾಮಸಭೆಯಲ್ಲಿ ಗುರುವಾರ ಸಂಭ್ರಮದ ವಾತಾವರಣ ಕಂಡುಬಂತು. ಶಿಶು ಅಭಿವೃದ್ಧಿ ಯೋಜನೆ, ಗ್ರಾಪಂ ವ್ಯಾಪ್ತಿಯ ಆರು ಅಂಗನವಾಡಿ ಕೇಂದ್ರಗಳ ವತಿಯಿಂದ ಪೌಷ್ಟಿಕ ಮಾಸಾಚರಣೆ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಮತ್ತು ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ಗ್ರಾಪಂ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.
ಮಹಿಳಾ ಗ್ರಾಮಸಭೆಗೆ ನೂರಾರು ಮಂದಿ ಮಹಿಳೆಯರು ಆಗಮಿಸಿದ್ದರು. ಗ್ರಾಮದ ನಾಲ್ವರು ಗರ್ಭಿಣಿಯರಿಗೆ ಸೀಮಂತ ಮತ್ತು 3 ಮಕ್ಕಳಿಗೆ ಅನ್ನಪ್ರಾಶನ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿ, ಗ್ರಾಪಂ ಸದಸ್ಯೆಯರು, ಅಂಗನವಾಡಿ ಮೇಲ್ವಿಚಾರಕಿಯರು ಗರ್ಭಿಣಿಯರಿಗೆ ಬಾಳೆಹಣ್ಣು, ಚಕ್ಕುಲಿ, ಸಿಹಿತಿಂಡಿ, ಸೀರೆ ಉಡುಗೊರೆ ನೀಡಿ ಶೋಭಾನೆ ಹಾಡಿನೊಂದಿಗೆ ಆರತಿ ಬೆಳಗಿ ಸೀಮಂತ ಶಾಸ್ತ್ರ ನೆರವೇರಿಸಿರು.
ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ್ ರಾವ್ ಮಾತನಾಡಿದರು. ಎಸ್‌ಎಲ್‌ಆರ್‌ಎಂ ಘಟಕ ಮೇಲ್ವಿಚಾರಕಿ ಲೋಲಾಕ್ಷಿ ಕೋತ್ವಾಲ್ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ತಿಳಿಸಿದರು. ಮಾದಕಮುಕ್ತ ಕರ್ನಾಟಕದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪೌಷ್ಟಿಕ ಆಹಾರ, ಧಾನ್ಯಗಳಿಂದ ರಚಿಸಿದ ಚಿತ್ರ ಗಮನ ಸೆಳೆಯಿತು.
ಗ್ರಾಪಂ ಉಪಾಧ್ಯಕ್ಷೆ ವನಿತಾ ಪೂಜಾರಿ, ಸದಸ್ಯರಾದ ರಾಜೀವ ಕುಲಾಲ್, ಮಮತಾ ಶೆಟ್ಟಿ, ಮಾಲತಿ ನಾಯ್ಕ, ರತ್ನಾಕರ ಶೆಟ್ಟಿ, ಚಂದ್ರಾವತಿ ಹೆಬ್ಬಾರ್, ಅಂಗನವಾಡಿ ಮೇಲ್ವಿಚಾರಕಿ ಪೂರ್ಣಿಮಾ, ಆರೂರು ಗ್ರಾಮ ಆಡಳಿತಾಧಿಕಾರಿ ಭವ್ಯಾ, ಅಭಿವೃದ್ಧಿ ಅಧಿಕಾರಿ ಪ್ರಮೀತಾ ಉಪಸ್ಥಿತರಿದ್ದರು.
ಮಹಿಳೆಯರು ಆಗಾಗ್ಗೆ ಹಿಮೊಗ್ಲೋಬಿನ್ ತಪಾಸಣೆ ಮಾಡಿಸಿಕೊಳ್ಳಬೇಕು. ಶುದ್ಧ ತುಪ್ಪ ತಿಂದರೆ ಕೊಲೆಸ್ಟ್ರಾಲ್ ಬರುವುದಿಲ್ಲ. ಕಡಿಮೆ ಬೆಲೆಯಲ್ಲಿ ಸಿಗುವ ಆಯೋಡಿನ್ ಉಪ್ಪು ಕೂಡಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗ್ರತೆ ವಹಿಸಿ ಪೌಷ್ಟಿಕಾಂಶಯುಕ್ತವಾದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. -ವೀಣಾ, ಸಮುದಾಯ ಆರೋಗ್ಯ ಅಧಿಕಾರಿ https://www.vijayavani.net/amitabh-bachchans-birthday-program-by-samaana-manasaka-kannadigara-vedhike-at-sagri-school-udupi https://www.vijayavani.net/medical-assistance-to-girl-from-bandhavya-foundation