ಜಿಲ್ಲೆ

ಖುದ್ದು ನೋಡಿ ಅಧ್ಯಯನ ನಡೆಸಿ

ವೀರೇಶ ಸೌದ್ರಿ

ಶಿರಸಿ: ತೋಟಗಾರಿಕೆ ವಿಶ್ವ ವಿದ್ಯಾಲಯ ಬಾಗಲಕೋಟೆಯಲ್ಲಿದ್ದು, ಅಡಕೆ ಬೆಳೆ ಬಗ್ಗೆ ಅವರಿಗೆ ವಿಶೇಷ ಮಾಹಿತಿ ಇಲ್ಲ. ಅಲ್ಲಿಯ ಅಧಿಕಾರಿಗಳು, ಪ್ರಾಧ್ಯಾಪಕರು ಜಿಲ್ಲೆಯ ಅಡಕೆ ತೋಟಗಳಲ್ಲಿ ಸಂಚರಿಸಿ, ಎಲೆಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.

ತಾಲೂಕಿನಾದ್ಯಂತ ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗ ತೀವ್ರವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಯಡಳ್ಳಿಯಲ್ಲಿ ಔಷಧ ವಿತರಣಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಇಲ್ಲದ ಕಾಯಿಲೆಗಳು ಅಡಕೆ ತೋಟಕ್ಕೆ ಬರುತ್ತಿವೆ. ಬೇರುಹುಳು ಕಾಟ ಕಡಿಮೆಯಾಗಿದೆ. ಆದರೆ ಎಲೆಚುಕ್ಕಿ ರೋಗ ತೀವ್ರವಾಗಿದೆ. ಒಂದೆಡೆ ದಶಕದ ಹಿಂದೆಯೇ ರೈತರೆಲ್ಲ ಭತ್ತದ ಗದ್ದೆಗಳನ್ನೂ ಅಡಕೆ ತೋಟವನ್ನಾಗಿ ಪರಿವರ್ತಿಸಿದ್ದಾರೆ. ನಿರೀಕ್ಷೆ ಮೀರಿ ಅಡಕೆ ತೋಟ ವಿಸ್ತರಣೆ ಆಗಿದೆ. ಈಗ ಸಮಸ್ಯೆಗಳೂ ಜೋರಾಗಿದ್ದು, ರೋಗ ಹತೋಟಿಗೆ ತರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಎಲೆಚುಕ್ಕಿ ಕಡಿಮೆ ಆದರೆ ಸಾಕು ಎಂಬ ಆತಂಕದಲ್ಲಿರುವ ರೈತರು, ಯಾವ ಔಷಧ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕಲ್ಪನೆ ಇಲ್ಲದೆ ಔಷಧ ಖರೀದಿಸುತ್ತಿದ್ದಾರೆ. ಅಂಗಡಿಕಾರರು ಲಾಭದ ಆಸೆಗಾಗಿ ತಪ್ಪು ಔಷಧ ನೀಡಬಾರದು. ಯಾವ ತೋಟಕ್ಕೆ ರೋಗ ತಗುಲಿದೆಯೋ ಅಲ್ಲಿ ಸಮೀಕ್ಷೆ ಮಾಡಿ ಔಷಧ ನೀಡಬೇಕು. ಸೂಕ್ತ ಸಂಶೋಧನೆ ಆದರೆ ಮಾತ್ರ ಔಷಧ ನೀಡಲು ಸಾಧ್ಯ. ಈಗ 9.5 ಲಕ್ಷ ರೂ. ಬೆಲೆಯ ಔಷಧಗಳನ್ನು ತಾಲೂಕಿನ ರೈತರಿಗೆ ವಿತರಿಸಲಾಗುತ್ತಿದ್ದು, ಅಗತ್ಯವಿದ್ದರೆ ಇನ್ನೂ ಜಾಸ್ತಿ ಅನುದಾನ ಬಿಡುಗಡೆಗೊಳಿಸಲಾಗುವುದು. ಈ ಕುರಿತಂತೆ ಮುಖ್ಯಮಂತ್ರಿ ಮತ್ತು ತೋಟಗಾರಿಕೆ ಇಲಾಖೆ ಸಚಿವರೊಂದಿಗೆ ಮಾತನಾಡಲಿದ್ದೇನೆ. ಅಗತ್ಯವಿದ್ದರೆ ಶಾಸಕರ ಅನುದಾನದಿಂದಲೂ ಹಣ ಬಿಡುಗಡೆ ಮಾಡಲಾಗುವುದು ಎಂದರು.

ತಾಪಂ ಇಒ ಸತೀಶ ಹೆಗಡೆ ಮಾತನಾಡಿ, 2018ರಲ್ಲಿ ದಕ್ಷಿಣ ಕನ್ನಡದ ಸುಳ್ಯದಲ್ಲಿ, ತೀರ್ಥಹಳ್ಳಿಯಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಅಡಕೆ ಬೆಳೆಗಾರರಿಗೂ ಕಾಡುತ್ತಿದೆ. ಈ ರೋಗ ಹೊಸದಲ್ಲದಿದ್ದರೂ ಈಗ ವಿಸ್ತಾರ ಜಾಸ್ತಿಯಾಗಿರುವುದು ಸಮಸ್ಯೆಯಾಗಿದೆ. ಸಿಪಿಸಿಆರ್‌ಐ ವರದಿಯಂತೆ ರೋಗ ತಡೆಗಟ್ಟಲು ಮಣ್ಣಿನ ಸಂರಕ್ಷಣೆ ಅಗತ್ಯ. ಮಳೆ ಕಡಿಮೆ ಆದ ಬಳಿಕ ತೋಟಕ್ಕೆ ಸುಣ್ಣ, ಪೋಷಕಾಂಶ ನೀಡಿ ಗಿಡಕ್ಕೆ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡಬೇಕು ಎಂದರು.

ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ಎಲೆಚುಕ್ಕಿ ರೋಗ ಜಾಸ್ತಿ ಆಗಿದೆ. ಶಿರಸಿ ತಾಲೂಕಿನ 6570 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಗೆ ಎಲೆಚುಕ್ಕಿ ರೋಗವಿದ್ದು, ಶೇ. 70ರಷ್ಟು ಅಡಕೆ ಮರಗಳಿಗೆ ಬಾಧಿಸಿದೆ. ಸಂಪಖಂಡ ಹೋಬಳಿಯಲ್ಲಿ 1919 ಹೆಕ್ಟೇರ್ ನಲ್ಲಿ 1500 ಹೆಕ್ಟೇರ್‌ಗೆ ಎಲೆಚುಕ್ಕಿ ರೋಗ ಬಂದಿದೆ ಎಂದರು.

ರೈತ ವೆಂಕಟೇಶ ಹೆಗಡೆ ಹೊಸಬಾಳೆ ಅನುಭವ ಹಂಚಿಕೊಂಡು, ವಿಜ್ಞಾನಿಗಳು ತೋಟಕ್ಕೆ ಬಂದು ಸಂಶೋಧನೆ ಮಾಡಿದರೂ ಎಲೆಚುಕ್ಕಿ ರೋಗಕ್ಕೆ ಸೂಕ್ತ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಭರವಸೆ ಮೂಡಿಸುವ ಕಾರ್ಯ ಆಗಬೇಕು. ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರೇ ಜಾಸ್ತಿ ಇದ್ದಾರೆ. ಅವರನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.

ಕುಳವೆ ಗ್ರಾಪಂ ಅಧ್ಯಕ್ಷೆ ರಂಜಿತಾ ಹೆಗಡೆ, ಕಾನಗೋಡ ಗ್ರಾಪಂ ಅಧ್ಯಕ್ಷ ಪ್ರಕಾಶ ನಾಯ್ಕ, ಯಡಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ಭಾಸ್ಕರ ಶೆಟ್ಟಿ, ಗಣೇಶ ಹೆಗಡೆ ಇತರರಿದ್ದರು.

ಶಿರಸಿಯಲ್ಲಿ ಲ್ಯಾಬ್...

ಶಿರಸಿಯಲ್ಲಿ ಮಂಗನ ಕಾಯಿಲೆ ಪರೀಕ್ಷಾ ಪ್ರಯೋಗಾಲಯ ನಿರ್ಮಿಸುವ ಸಲುವಾಗಿ ರಾಜ್ಯ ಸರ್ಕಾರ 30 ಲಕ್ಷ ರೂ. ಮಂಜೂರು ಮಾಡಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಮಾಹಿತಿ ನೀಡಿದರು.

ಮಂಗನಕಾಯಿಲೆಯ ಮಾದರಿಯನ್ನು ಶಿವಮೊಗ್ಗದ ಪರೀಕ್ಷಾ ಲ್ಯಾಬ್‌ಗೆ ಇದುವರೆಗೆ ಕಳಿಸಿಕೊಡಲಾಗುತ್ತಿತ್ತು. ಆದರೆ, ಪರೀಕ್ಷೆಗೆ ಸಂಗ್ರಹಿಸಿದ ರಕ್ತ, ಕಫ ಇನ್ನಿತರ ಸಂಗತಿಗಳನ್ನು ತ್ವರಿತವಾಗಿ ಲ್ಯಾಬ್‌ಗೆ ಒದಗಿಸಬೇಕಿದೆ. ಶಿವಮೊಗ್ಗಕ್ಕೆ ತೆರಳುವ ವೇಳೆ ಸಮಯ ಹಿಡಿದ ಸಂಗ್ರಹಿಸಿದ ರಕ್ತ, ಕಫದಿಂದ ಪರೀಕ್ಷೆ ಮಾಡಲು ಸಾಧ್ಯವಾಗದೇ ರೋಗಿಯನ್ನೇ ಅಲ್ಲಿಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯಬೇಕಾದ ಸ್ಥಿತಿ ಉಂಟಾಗುತ್ತಿತ್ತು. ಈ ಕುರಿತಂತೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಲ್ಲಿ ಮಾತನಾಡಿದ್ದರಿಂದ ಶಿರಸಿಯಲ್ಲಿ ಲ್ಯಾಬ್ ಸ್ಥಾಪಿಸಲು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿ, ವೈದ್ಯರ ತಂಡದ ಸಭೆ ನಡೆಸಲಿದ್ದೇನೆ ಎಂದರು.