ಜಿಲ್ಲೆ

ಭದ್ರತಾ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಭದ್ರತಾ ಮತ್ತು ಜಾಗೃತಾ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ದೈಹಿಕ ಸಾಮರ್ಥ್ಯ ವೃದ್ಧಿ, ಶಿಸ್ತು ಮತ್ತು ಶಿಷ್ಟಾಚಾರಗಳ ಕುರಿತು ತರಬೇತಿ ನೀಡಲಾಯಿತು. ಕಾರ್ಯಗಾರದಲ್ಲಿ 50 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪೊಲೀಸ್ ಇಲಾಖೆಯ ತರಬೇತಿದಾರ ರಾಜಶೇಖರ್ ಮಡಿವಾಳರ, ನಿವೃತ್ತ ಆರ್ ಎಸ್ಐ ಶ್ರೀಕಾಂತ ಬದ್ದಿ, ಡಾ. ಕಿರಣ ಖೋತ, ನಿವೃತ್ತ ಸೇನಾಧಿಕಾರಿ ಕರ್ನಲ್ ರವಿ ಶಿರಹಟ್ಟಿ ಅವರು ಮಾರ್ಗದರ್ಶನ ಮಾಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಭದ್ರತಾ ಅಧಿಕಾರಿ ಗಣೇಶ ರಾಥೋಡ್, ಸಾರಿಗೆ ಸಂಸ್ಥೆಯ ಆಸ್ತಿ ರಕ್ಷಣೆ ಮತ್ತು ಭದ್ರತೆ ಒದಗಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಬಹು ಪ್ರಮುಖವಾಗಿದ್ದು, ಇಬ್ಬರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಶ್ರೀನಿವಾಸಮೂರ್ತಿ, ಅಧಿಕಾರಿಗಳಾದ ಬಿ.ಡಿ. ಗುರಿಕಾರ ಅವರು ಸಿಬ್ಬಂದಿಗೆ ಪ್ರಮಾಣ ಪತ್ರ ವಿತರಿಸಿದರು. ವಿರೂಪಾಕ್ಷ ಕಟ್ಟಿಮನಿ ನಿರೂಪಿಸಿದರು. ವಿಶ್ವೇಶ್ ಹಿರೇಮಠ ವಂದಿಸಿದರು.