ನರಸಾಪುರ: ಕೆಲಸಕ್ಕೆ ತಡವಾಗಿ ಬರುತ್ತಿದ್ದವರನ್ನು ಪ್ರಶ್ನಿಸುತ್ತಿದ್ದ ಸೆಕ್ಯೂರಿಟ್ ಗಾರ್ಡ್ ಕೆಲ ದುರುಳ ಕಾರ್ಮಿಕರಿಂದ ಕೊಲೆಯಾಗಿದ್ದಾನೆ. ಖಾಜಿಕಲ್ಲಹಳ್ಳಿ ನಿವಾಸಿ ಪಿಳ್ಳಪ್ಪ (60) ಕೊಲೆಯಾದವ. ಬಿಹಾರ್ ಮೂಲದ ರಿಂಕು ಚೌಧರಿ(21)ಸೇರಿ ಇತರರ ಮೇಲೆ ದೂರು ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಿಂಕು ಚೌಧರಿ ಪದೇಪದೆ ತಡವಾಗ ಬರುತ್ತಿದ್ದುದ್ದನ್ನು ಗಮನಿಸಿದ ಪಿಳ್ಳಪ್ಪ ಈ ಬಗ್ಗೆ ಪ್ರಶ್ನಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಆರೋಪಿ ಕರ್ತವ್ಯದಲ್ಲಿದ್ದ ಪಿಳ್ಳಪ್ಪನನ್ನು ಗುರುವಾರ ಹೊರಗಡೆ ಕರೆದುಕೊಂಡು ಹೋಗಿ, ಮೊಬೈಲ್ ಕಸಿದುಕೊಂಡು 5 ಲಕ್ಷ ರೂ. ಕಳುಹಿಸಿಕೊಡುವಂತೆ ಕಂಪನಿ ನಿರ್ವಾಹಕರಿಗೆ ಸಂದೇಶ ಕಳುಹಿಸಿದ್ದ. ಹಣ ಕೊಟ್ಟರೆ ಬಿಡುತ್ತೇವೆ ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಬೇದರಿಸಿದ್ದ ಎನ್ನಲಾಗಿದೆ. ಬಳಿಕ ಕೊಲೆ ಮಾಡಿ ಚರಂಡಿಯಲ್ಲಿ ಮೃತದೇಹ ಬೀಸಾಡಿದ್ದು, ಕೃತ್ಯದಲ್ಲಿ ಹಲವರು ಭಾಗಿಯಾಗಿರುವ ಅನುಮಾನಲ್ಲಿ ತನಿಖೆ ಮುಂದುವರಿಸಿದೆ. ವೇಮಗಲ್ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.
ಮುಳಬಾಗಿಲು: ತಾಲೂಕಿನ ತಿಪ್ಪದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಲಾರಿಯಲ್ಲಿದ್ದ ಸಸಿ ಕೆಳಗಿಳಿಸಲು ಲಾರಿ ಮೇಲೆ ಹತ್ತುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಲಾರಿ ಕ್ಲೀನರ್ ಸ್ಥಳದದಲ್ಲೇ ಮೃತಪಟ್ಟಿದ್ದಾನೆ.
ಚಿಂತಾಮಣಿ ಮೂಲದ ಶ್ರೀನಾಥ್ (23) ಮೃತ. ಆಂಧ್ರಪ್ರದೇಶದಿಂದ ಮಾವಿನ ಸಸಿಗಳನ್ನು ತುಂಬಿಕೊಂಡು ಬಂದಿದ್ದ ಲಾರಿ ತಿಪ್ಪದೊಡ್ಡಿ ಗ್ರಾಮದ ರಮೇಶ್ರೆಡ್ಡಿ ಎಂಬುವರ ತೋಟದಲ್ಲಿ ವಿದ್ಯುತ್ ತಂತಿ ಕೆಳಗಡೆಯೇ ನಿಲ್ಲಿಸಿ ಚಾಲಕ ಮಲಗಿದ್ದಾನೆ. ಈ ವೇಳೆ ಲಾರಿ ಕ್ಲೀನರ್ ಕ್ಯಾಬಿನ್ ಮೇಲೆ ಹತ್ತಿದಾಗ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.