ಜಿಲ್ಲೆ

ರೈಲು ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಿಶ್ವದ ಅತಿ ಉದ್ದನೆಯ ಪ್ಲಾಟ್​ಫಾಮ್ರ್ ಹೊಂದಿರುವ ಖ್ಯಾತಿ ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಯಾರು ಬೇಕಾದರೂ ಪ್ರವೇಶಿಸಬಹುದು. ನೈಋತ್ಯ ರೈಲ್ವೆ ಮುಖ್ಯ ಕಚೇರಿ ಇರುವ, ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿಯೇ ಭದ್ರತೆಯ ಕೊರತೆ ಇರುವುದು ಬೆಳಕಿಗೆ ಬಂದಿದೆ.

ಅಧಿಕೃತ ಪರವಾನಿಗೆ ಇಲ್ಲದೇ ರೈಲು ನಿಲ್ದಾಣ ಪ್ರವೇಶಿಸುವುದೂ ಕಷ್ಟಸಾಧ್ಯ. ಅಂತಹದರಲ್ಲಿ ಪರವಾಗಿ ನೀಡುವ ಮೊದಲೇ ಪ್ರಯಾಣಿಕರನ್ನು ಸಾಗಿಸುವ ಬ್ಯಾಟರಿ ಚಾಲಿತ ಕಾರು, ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದಲ್ಲದೆ, ನಿಲ್ದಾಣದ ಪ್ಲಾಟ್​ಫಾಮರ್್​ಗಳಲ್ಲಿ ಪ್ರಯಾಣಿಕರನ್ನು ಹೊತ್ತು ಓಡಾಡಿರುವುದು ನೈಋತ್ಯ ರೈಲ್ವೆ ವಲಯದ ಭದ್ರತೆಯನ್ನೇ ಪ್ರಶ್ನಿಸುವಂತಿದೆ.

ಈ ಘಟನೆ ನಡೆದಿದ್ದು ಕಳೆದ ಸೋಮವಾರ (ನ. 4). ಈಗಾಗಲೇ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೂರು ಬ್ಯಾಟರಿ ಚಾಲಿತ ಕಾರುಗಳು ಇದ್ದು, ವಯಸ್ಸಾದವರು, ಮಕ್ಕಳು ಹಾಗೂ ಇತರ ಪ್ರಯಾಣಿಕರನ್ನು ಹೊತ್ತು ಪ್ಲಾಟ್​ಫಾಮರ್್​ನಿಂದ ಪ್ಲಾಟ್​ಫಾಮರ್್​ಗೆ ಸಂಚರಿಸುತ್ತಿವೆ.

ಮೊದಲ ಪ್ಲಾಟ್​ಫಾಮರ್್​ನಿಂದ 6ನೇ ಪ್ಲಾಟ್​ಫಾಮರ್್​ಗೆ ತೆರಳಲು ಪ್ರಯಾಣಿಕರ ಬೇಡಿಕೆ ಮೇರೆಗೆ ಇನ್ನೂ ಮೂರು ಬ್ಯಾಟರಿ ಚಾಲಿತ ಕಾರುಗಳಿಗಾಗಿ ನೈಋತ್ಯ ರೈಲ್ವೆ ವಲಯ ವಿಶಾಖಪಟ್ಟಣ ಮೂಲದ ರಾಧಾಕೃಷ್ಣ ಎಂಟರ್​ಪ್ರೖೆಸಿಸ್ ಎಂಬುವವರಿಗೆ ಗುತ್ತಿಗೆ ನೀಡಿತ್ತು.

ಪ್ರತಿ ಪ್ರಯಾಣಿಕರಿಂದ 20 ರೂ. ಶುಲ್ಕ ಪಡೆದು, ಈ ಬ್ಯಾಟರಿ ಚಾಲಿತ ಕಾರುಗಳು ಪ್ರಯಾಣಿಕರನ್ನು ಕೂರಿಸಿಕೊಂಡು ಒಂದು ಪ್ಲಾಟ್​ಫಾಮರ್್​ನಿಂದ ಮತ್ತೊಂದು ಪ್ಲಾಟ್​ಫಾಮರ್್​ಗೆ ಚಲಿಸುತ್ತವೆ.

ಗುತ್ತಿಗೆದಾರರು ನ. 4ರಂದು ಮೂರು ಬ್ಯಾಟರಿ ಚಾಲಿತ ಕಾರುಗಳೊಂದಿಗೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸಿ, ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಕಾರುಗಳನ್ನು ಚಲಾಯಿಸುವ ಚಾಲಕರ ಬಗ್ಗೆಯೂ ಮಾಹಿತಿ ನೀಡಿ, ರೈಲ್ವೆ ಅಧಿಕಾರಿಗಳಿಂದ ಗುರುತಿನ ಚೀಟಿ ಪಡೆಯಬೇಕಿತ್ತು. ಆದರೆ, ಇಂತಹ ಯಾವುದೇ ಕಾರ್ಯಗಳನ್ನು ನಡೆಸದೇ, ನ. 4ರಂದು ಬ್ಯಾಟರಿ ಚಾಲಿತ ಕಾರೊಂದು ರೈಲು ನಿಲ್ದಾಣ ಪ್ರವೇಶಿಸಿದೆ.

ರೈಲು ನಿಲ್ದಾಣದ ಮುಖ್ಯ ದ್ವಾರದ ಬಳಿ ಇರುವ ರೈಲ್ವೆ ಹಾಗೂ ಆರ್​ಪಿಎಫ್​ನ ಸಿಬ್ಬಂದಿ ಯಾವುದೇ ಪರಿಶೀಲನೆ ನಡೆಸದೇ, ಬ್ಯಾಟರಿ ಕಾರನ್ನು ನಿಲ್ದಾಣದೊಳಗೆ ಪ್ರವೇಶಿಸಲು ಬಿಟ್ಟಿದ್ದಾರೆ.

ಈ ಬ್ಯಾಟರಿ ಕಾರಿನ ಚಾಲಕ ಯಾವುದೇ ಗುರುತಿನ ಚೀಟಿ ಇಲ್ಲದೇ ಪ್ರತಿ ಪ್ರಯಾಣಿಕರಿಂದ 20 ರೂ. ಶುಲ್ಕ ಪಡೆದು, ಎರಡ್ಮೂರು ತಾಸು ನಿಲ್ದಾಣದಲ್ಲಿ ಸುತ್ತಾಡಿದ್ದಾನೆ. ಈ ಸಂದರ್ಭದಲ್ಲಿ ವಿಶ್ವದ ಅತಿ ಉದ್ದನೆಯ ಮೊದಲ ಪ್ಲಾಟ್​ಫಾಮರ್್​ನಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ, ಬ್ಯಾಟರಿ ಕಾರು ಪ್ಲಾಟ್​ಫಾಮರ್್​ನಿಂದ ಕೆಳಗೆ ಬಿದ್ದಿದೆ. ಅದರಲ್ಲಿದ್ದ ಪ್ರಯಾಣಿಕರಾದ ನಿವೃತ್ತ ರೈಲ್ವೆ ನೌಕರ ಗೂಳಪ್ಪ ರಾಮನ ಕಾಲು ಮುರಿದರೆ, ಮತ್ತೊಬ್ಬ ಪ್ರಯಾಣಿಕ ಗೋಪಾಲ ದೇಶಪಾಂಡೆ ಕಿವಿ ಹರಿದಿದೆ. ಇಬ್ಬರನ್ನೂ ಚಿಕಿತ್ಸೆಗಾಗಿ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬ್ಯಾಟರಿ ಕಾರನ್ನು ವಶಕ್ಕೆ ಪಡೆದ ಆರ್​ಪಿಎಫ್ ಪೊಲೀಸರು, ಚಾಲಕ ಮೊಹ್ಮದ್​ರೌಫ್​ನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಅನಧಿಕೃತವಾಗಿ ರೈಲು ನಿಲ್ದಾಣ ಪ್ರವೇಶಿಸಿದ್ದಕ್ಕೆ ಕಲಂ 147, ಪ್ರಯಾಣಿಕರನ್ನು ಗಾಯಗೊಳಿಸಿದ್ದಕ್ಕೆ ಕಲಂ 153 ಹಾಗೂ ರೈಲ್ವೆ ಆಸ್ತಿಯಲ್ಲಿ ಓಡಾಡಿದ್ದಕ್ಕೆ ಕಲಂ 159ನೇ ಸೆಕ್ಷನ್​ನಡಿ ಪ್ರಕರಣ ದಾಖಲಾಗಿದೆ ಎಂದು ಸೀನಿಯರ್ ಡಿವಿಜನಲ್ ಸೆಕ್ಯೂರಿಟಿ ಕಮಾಂಡಂಟ್ ಅಲೋಕಕುಮಾರ ಮಾಹಿತಿ ನೀಡಿದ್ದಾರೆ.

ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಮುಖ್ಯ ಟಿಕೆಟ್ ಪರಿವೀಕ್ಷಕ ನಜೀರ ಮಕಾಂದರ, ರೈಲು ನಿಲ್ದಾಣದ ಉಪ ವ್ಯವಸ್ಥಾಪಕ ಕೆ.ಎಲ್. ಇಸ್ರೇಲ್ ಹಾಗೂ ಗೇಟ್​ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಅಧಿಕೃತ ಪರವಾನಿಗೆ ಇಲ್ಲದೇ ರೈಲು ನಿಲ್ದಾಣಕ್ಕೆ ಬ್ಯಾಟರಿ ಕಾರು ಪ್ರವೇಶ ಮಾಡಿದ್ದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಾದ ರಾಧಾಕೃಷ್ಣ ಎಂಟರ್​ಪ್ರೖೆಸಿಸ್​ಗೆ ನೋಟಿಸ್ ಕೊಡಲಾಗುತ್ತಿದೆ ಎಂದು ವಿಭಾಗೀಯ ವಾಣಿಜ್ಯ ರೈಲ್ವೆ ಹಿರಿಯ ವ್ಯವಸ್ಥಾಪಕ ಸಂತೋಷ ಹೆಗಡೆ ತಿಳಿಸಿದ್ದಾರೆ.