ರಾಯಚೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿ ಮತ್ತು ಅವನತಿಗೆ ಕಾರ್ಯದರ್ಶಿಗಳು ಪ್ರಮುಖ ಕಾರಣರಾಗುತ್ತಿದ್ದು, ಸಂಘದ ವ್ಯವಹಾರದಲ್ಲಿ ಸಿಬ್ಬಂದಿಗಳು ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಆರ್‌ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.
ಸ್ಥಳೀಯ ಆರ್‌ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಕಾರಿಗಳಿಗೆ ಗುರುವಾರ ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಕಾರಿಗಳು ಗ್ರಾಮದ ರೈತರೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಸಂಘದ ಏಳು ಬೀಳುಗಳು ಅವರ ಮೇಲೆ ಅವಲಂಬಿತವಾಗಿರುತ್ತವೆ. ಅಕಾರಿಗಳು ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿಷಯಗಳನ್ನು ತಮ್ಮ ಕಾರ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಮಾತನಾಡಿ, ಸಂಘದ ಬೆಳವಣಿಗೆ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯವರ ಉತ್ತಮ ಸಂವಹನದಿಂದ ಮಾತ್ರ ಸಾಧ್ಯವಾಗಲಿದೆ. ಸಂಘದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಿರುವ ಸಹಕಾರ ಮತ್ತು ಸಿಬ್ಬಂದಿಗಳಿಗೆ ತರಬೇತಿಯನ್ನು ಒಕ್ಕೂಟ ನೀಡಲು ಸದಾ ಸಿದ್ಧವಿದೆ ಎಂದರು.
ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೋಡ ಸಹಕಾರ ಸಂಘಗಳಲ್ಲಿ ಮುಖ್ಯ ಕಾರ್ಯನಿರ್ವಾಹಣಾಕಾರಿಯ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು, ನಿವೃತ್ತ ಪ್ರಾಧ್ಯಾಪಕ ಟಿ.ಬಿ.ಗುರುಬಸಪ್ಪ ಸಂಘಗಳಲ್ಲಿ ವ್ಯಾಪಾರಾಭಿವೃದ್ಧಿ ಯೋಜನೆ ಕುರಿತು, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಆರ್.ಮನೋಹರ ಆಡಳಿತ ಮಂಡಳಿ ಚುನಾವಣೆ ಮತದಾರರ ಪಟ್ಟಿ ತಯಾರಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಪ್ಪ ಹ್ಯಾಟಿ, ವ್ಯವಸ್ಥಾಪಕ ನಿರ್ದೇಶಕ ಐ.ಎಸ್.ಗಿರಡ್ಡಿ, ಒಕ್ಕೂಟದ ನಿರ್ದೇಶಕ ಎಸ್.ಜಿ.ಕಲ್ಲಯ್ಯ ಸ್ವಾಮಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಬಸವರಾಜ ಕೊಂಕಲ್, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಕಾರಿ ಮಂಜುಳಾ, ಸಹಕಾರ ಶಿಕ್ಷಕಿ ಕೆ.ಅಶ್ವಿನಿ ಉಪಸ್ಥಿತರಿದ್ದರು.