ಗದಗ: ಪ್ರಾಚೀನ ಕಾಲದಿಂದಲೂ ಧರ್ಮ, ಸಂಸ್ಕೃತಿ, ಕಲೆಯ ತವರೂರಾದ ಗದಗ ಜಿಲ್ಲೆ ತನ್ನ ಚಾರಿತ್ರಿಕ ಹಾಗೂ ಸಮಕಾಲೀನ ವಿಶೇಷಗಳಿಂದ ರಾಜ್ಯಾದ್ಯಂತ ಜನರ ಗಮನ ಸೆಳೆದಿದೆ. ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ ನೆಲೆಸಿದ ಭೂಮಿಯಾಗಿದ್ದು ಸಾಹಿತ್ಯ, ಸಂಗೀತ, ಲಲಿತಕಲೆಗಳಿಗೆ ಹೆಸರು ವಾಸಿ ಯಾಗಿದೆ ಎಂದು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಸಾಹಿತಿ ರವೀಂದ್ರ ಕೊಪ್ಪರ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಹಂತದವರೆಗೆ ಶಿಕ್ಷಣವು ಮಾತೃಭಾಷಾ ಮಾಧ್ಯಮದಲ್ಲಿಯೇ ನಡೆಯಬೇಕು. ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಕನ್ನಡ ನುಡಿಯನ್ನು ಸರಾಗವಾಗಿ ಓದುವ ಕಲೆಯನ್ನು ರೂಢಿಸುವುದಕ್ಕೆ ಹಾಗೂ ಬರಹದ ಶುದ್ಧತೆಗೆ ಹೆಚ್ಚಿನ ಗಮನ ನೀಡಬೇಕು. ಮಾತೃಭಾಷೆಗೆ ಆದ್ಯತೆ ಸಲ್ಲುವಂತೆ ಮಾಡುವುದು ಪಾಲಕರ ಹಾಗೂ ಕನ್ನಡಾಭಿಮಾನಿಗಳ ಸಾಮಾಜಿಕ ಹೊಣೆಗಾರಿಕೆಯಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಸೇರಿ ಕನ್ನಡ ನುಡಿಗೆ ಮೀಸಲಾಗಿರುವ ಸಂಘಟನೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಸಂಘಟಿಸಬೇಕು. ನಾಡು- ನುಡಿಯ ಬಗೆಗೆ ಅಭಿಮಾನ, ಹೆಮ್ಮೆ, ರಾಜ್ಯ-ರಾಷ್ಟ್ರದ ಬಗೆಗೆ ಗೌರವಾದರದ ಭಾವ ಸಂವರ್ಧಿಸುವಂತೆ ಮಾಡುವ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿನ ಬರಹಗಳು, ಭಿತ್ತಿಪತ್ರಗಳು, ಸಾರ್ವಜನಿಕ ಸಂದೇಶಗಳು, ನಾಮಫಲಕಗಳಲ್ಲಿನ ಕನ್ನಡ ಬರಹ ಶುದ್ಧವಾಗಿರಬೇಕು. ಬರಹಗಳ ಪ್ರಕ್ರಿಯೆಯಲ್ಲಿ ತೊಡಗಿರುವ ಬೆರಳಚ್ಚುಗಾರರು, ಕಲಾವಿದರಿಗೆ ಬರಹ ಕಲಿಸುವ ಕಮ್ಮಟಗಳನ್ನು ಏರ್ಪಡಿಸಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರದೇಶದಲ್ಲಿ ಔದ್ಯೋಗಿಕ ಪ್ರಗತಿ ಸಾಧಿಸದ ಕಾರಣ ವಿದ್ಯಾವಂತರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಾವರಿ ಸೌಲಭ್ಯಗಳಿಂದ ವಂಚಿತರಾದ ಕೃಷಿಕರು ಪರಿಸರದ ಏರು-ಪೇರುಗಳಿಂದ ಮಾನ್ಸೂನುಗಳ ಅನಿಶ್ಚಿತತೆಯಿಂದ ಉದ್ದೇಶಿತ ಇಳುವರಿ ಪಡೆಯದೇ ಪರಿತಪಿಸುತ್ತಿದ್ದಾರೆ. ನಾಡಿನ ಮಹತ್ವದ ಯೋಜನೆಯಾದ ಮಹದಾಯಿ ಜಲಯೋಜನೆ ಶೀಘ್ರವೇ ಪೂರ್ಣಗೊಳ್ಳಬೇಕು ಎಂದರು.
ಬಹುಸಂಖ್ಯೆಯಲ್ಲಿ ಪ್ರಕಟಗೊಳ್ಳುತ್ತಿರುವ ಅರ್ಥವಿಲ್ಲದ ಕಳಪೆ ಸಂಪಾದನಾ ಕೃತಿ ಪ್ರಕಟಣೆಗಳ ಬಗಗೆ ವಿಚಾರವಂತರು ಆಕ್ಷೇಪಣೆ ಮಾಡುತ್ತಲೇ ಬಂದಿದ್ದಾರೆ. ಕನ್ನಡಪರ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ ದುರ್ಗದ ನರಸಿಂಹ ಸ್ಮಾರಕ ಭವನ, ನಯಸೇನ ಸ್ಮಾರಕ ಭವನ, ಕುಮಾರವ್ಯಾಸ ಪ್ರತಿಷ್ಠಾನ ಭವನ, ಹುಯಿಲಗೋಳ ನಾರಾಯಣರಾವ್, ಭಾರತರತ್ನ ಭೀಮಸೇನ ಜೋಶಿ ಸ್ಮಾರಕ ಭವನಗಳನ್ನು ನಿರ್ವಿುಸಬೇಕು. | ರವೀಂದ್ರ ಕೊಪ್ಪರ ಸಮ್ಮೇಳನಾಧ್ಯಕ್ಷ