ಜಿಲ್ಲೆ

ಮೈಸೂರಿನಲ್ಲಿ ಆಸ್ತಿಗಾಗಿ ಎರಡನೇ ಪತ್ನಿ ಕೊಲೆ : ನಾಲ್ವರು ಆರೋಪಿಗಳ ಬಂಧನ

ಮೈಸೂರು: ಆಸ್ತಿಗಾಗಿ ಎರಡನೇ ಪತ್ನಿಯನ್ನು ಮೊದಲ ಪತ್ನಿಯ ಮಕ್ಕಳೊಂದಿಗೆ ಸೇರಿ ಪತಿರಾಯನೇ ಕೊಲೆ ಮಾಡಿದ್ದಾರೆ.

ಅಖಿಲಾ ಬಾನು(46) ಕೊಲೆಯಾದ ಎರಡನೇ ಪತ್ನಿ. ಈಕೆಯ ಪತಿ ಅಬ್ಬ ಥಾಯೂಬ್ ಹಾಗೂ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ತೋಸಿಫ್ ಹಾಗೂ ಮೊಹಮದ್ ಹೈದರ್ ಬಂಧಿತ ಆರೋಪಿಗಳು.

ಏನಿದು ಪ್ರಕರಣ?:

ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಅಬ್ಬ ಥಾಯೂಬ್ 2013 ರಲ್ಲಿ ಅಖಿಲಾಬಾನು ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ. ಮೊದಲ ಹೆಂಡತಿಗೆ ನಾಲ್ವರು ಮಕ್ಕಳಿದ್ದರು. ಎರಡನೇ ಪತ್ನಿ ಅಖಿಲಾಬಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗುಣಮುಖರಾಗಿದ್ದರು.

ಆದರೆ ಅಖಿಲಾಬಾನುಗೆ ಮಕ್ಕಳಾಗಿರಲಿಲ್ಲ. ಇತ್ತೀಚೆಗೆ ಅಖಿಲಾಬಾನುಗಾಗಿ ಅವರ ಅಕ್ಕನ ಮಗ ಸೈಯದ್ ಇರ್ಫಾನ್ ನಾಯ್ಡುನಗರದಲ್ಲಿ ಒಂದು ಮನೆ ಖರೀದಿಸಿಕೊಟ್ಟಿದ್ದ. ಥಾಯೂಬ್ ಹಾಗೂ ಅಖಿಲಾ ಬಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ಖಾತೆಯಾಗಿತ್ತು. 6 ತಿಂಗಳ ಹಿಂದಷ್ಟೆ ಮನೆ ಖರೀದಿಯಾಗಿತ್ತು. ಇತ್ತೀಚೆಗೆ ಮನೆಯನ್ನು ಮೊದಲ ಹೆಂಡತಿ ಮಕ್ಕಳಿಗೆ ಬರೆದು ಕೊಡಲು ಅಬ್ಬ ಥಾಯೂಬ್ ಪ್ರಯತ್ನಿಸಿದ್ದ. ಈ ವಿಚಾರದಲ್ಲಿ ಗಂಡ -ಹೆಂಡತಿ ಮಧ್ಯೆ ಆಗಾಗ್ಗೆ ಗಲಾಟೆ ಆಗಿದೆ. ಫೆ.16ರ ಬೆಳಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬ ಥಾಯೂಬ್, ಕಣ್ಣೀರಿಡುತ್ತಾ ಅಖಿಲಾಬಾನು ಮೃತಪಟ್ಟಿದ್ದಾಳೆ ಎಂದು ತಿಳಿಸಿ ಗೋಳಾಡಿದ್ದ.

ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾಬಾನು ಶವವನ್ನು ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರಚಿದ ಗಾಯಗಳು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್, ಈ ಸಾವು ಸಹಜವಲ್ಲ ಎಂದು ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.