ತುಮಕೂರು : ಗ್ರಾಪಂ 2ನೇ ಹಂತದ ಚುನಾವಣೆಗೆ ಸಲ್ಲಿಕೆಯಾಗಿದ್ದ 9179 ನಾಪಪತ್ರಗಳಲ್ಲಿ 146 ನಾಮಪತ್ರ ತಿರಸ್ಕೃತವಾಗಿವೆ. ಒಟ್ಟು 8781 ಮಂದಿ ಕಣದಲ್ಲಿದ್ದು, ನಾಮಪತ್ರ ಹಿಂಪಡೆಯಲು ಶನಿವಾರ ಕೊನೆಯ ದಿನವಾಗಿದೆ.
ಶಿರಾ ತಾಲೂಕಿನ 42 ಗ್ರಾಪಂಗಳು, ಮಧುಗಿರಿ-39, ತಿಪಟೂರು-26, ತುರುವೇಕೆರೆ-27 ಹಾಗೂ ಚಿಕ್ಕನಾಯಕನಹಳ್ಳಿ-27 ಗ್ರಾಪಂಗಳು ಒಟ್ಟು 161 ಗ್ರಾಪಂಗಳಿಗೆ ಡಿ.27ಕ್ಕೆ ಚುನಾವಣೆ ನಡೆಯಲಿದ್ದು, 2543 ಸ್ಥಾನಗಳಿಗೆ 9179 ನಾಮಪತ್ರ ಸಲ್ಲಿಕೆಯಾಗಿತ್ತು. ಗುರುವಾರ ನಾಮಪತ್ರ ಪರಿಶೀಲನೆ ನಡೆದಿದ್ದು, 146 ನಾಮಪತ್ರಗಳು ಕ್ರಮಬದ್ಧವಲ್ಲವೆಂದು ಕಂಡುಬಂದಿದೆ. 8781 ನಾಮಪತ್ರಗಳು ಊರ್ಜಿತವಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.
34 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಕೆ ಇಲ್ಲ: ಹೇಮೆ ನೀರಿಗಾಗಿ ಆಗ್ರಹಿಸಿ ಚುನಾವಣಾ ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ತಿಪಟೂರು ತಾಲೂಕಿನ ಹೊನ್ನವಳ್ಳಿ ಗ್ರಾಪಂನ 14 ಸ್ಥಾನಗಳಿಗೆ, ಶಿರಾ ತಾಲೂಕಿನ ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿಯ 15 ಸ್ಥಾನಗಳಿಗೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಆದರೆ, ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಣ್ಣ ಅರ್ಜಿ ಸಲ್ಲಿಸಿದ್ದರಾದರೂ ಶಿರಾ ನಗರ ಹಾಗೂ ಗೋಪಾಲದೇವರಹಳ್ಳಿಯಲ್ಲಿ ಮತಪಟ್ಟಿಯಲ್ಲಿ ಹೆಸರಿದ್ದರಿಂದ ಅವರ ನಾಮಪತ್ರ ಅಸಿಂಧುವಾಗಿದೆ ಎನ್ನಲಾಗಿದೆ.
ಇನ್ನುಳಿದಂತೆ ತಿಪಟೂರಿನ 26 ಗ್ರಾಮ ಪಂಚಾಯಿತಿಗಳ 419 ಸ್ಥಾನಗಳಿಗೆ 1341 ನಾಮಪತ್ರ ಸಲ್ಲಿಕೆಯಾಗಿದ್ದು, 11 ತಿರಸ್ಕೃತಗೊಂಡಿವೆ. 1211 ಕ್ರಮಬದ್ಧವಾಗಿವೆ. ಚಿಕ್ಕನಾಯಕನಹಳ್ಳಿಯ 27 ಗ್ರಾಮ ಪಂಚಾಯಿತಿಗಳ 448 ಸ್ಥಾನಗಳಿಗೆ 1419 ನಾಮಪತ್ರ ಸಲ್ಲಿಕೆಯಾಗಿದ್ದು 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 25 ನಾಮಪತ್ರ ಅನೂರ್ಜಿತಗೊಂಡಿದ್ದು 1394 ನಾಮಪತ್ರಗಳು ಊರ್ಜಿತವಾಗಿವೆ. ತುರುವೇಕೆರೆ ತಾಲೂಕಿನ 27 ಗ್ರಾಪಂಗಳ 401 ಸ್ಥಾನಗಳಿಗೆ 1380 ನಾಮಪತ್ರ ಸ್ವೀಕೃತವಾಗಿದ್ದು 94 ತಿರಸ್ಕೃತಗೊಂಡಿವೆ. 1286 ಕ್ರಮಬದ್ಧವಾಗಿವೆ.
ಶಿರಾದ 42 ಗ್ರಾಮ ಪಂಚಾಯಿತಿಗಳ 660 ಸ್ಥಾನಗಳಿಗೆ 2658 ನಾಮಪತ್ರ ಸಲ್ಲಿಕೆಯಾಗಿದ್ದು 14 ಕ್ರಮಬದ್ಧವಾಗಿರಲಿಲ್ಲ. 2644 ನಾಮಪತ್ರಗಳು ಕ್ರಮಬದ್ಧವಾಗಿವೆ. ಮಧುಗಿರಿ ತಾಲೂಕಿನ 39 ಗ್ರಾಮ ಪಂಚಾಯಿತಿಗಳ 615 ಸ್ಥಾನಗಳಿಗೆ 2381 ನಾಮಪತ್ರಗಳು ಸಲ್ಲಿಕೆಯಾಗಿದ್ದು 2 ನಾಮಪತ್ರ ತಿರಸ್ಕೃತಗೊಂಡಿದ್ದವು. 2246 ನಾಮಪತ್ರ ಕ್ರಮಬದ್ಧವಾಗಿವೆ.
ಕಣದಲ್ಲಿ ತೃತೀಯಲಿಂಗಿ ಫೈಜುಲ್ಲಾನ್ : ಗ್ರಾಪಂ ಚುನಾವಣೆ ಅಬ್ಬರದ ನಡುವೆ ವಿಶೇಷ ಎನ್ನುವಂತೆ ಕುನ್ನಾಲ ಗುಬ್ಬಿ ತಾಲೂಕು ಗ್ರಾಪಂ ವ್ಯಾಪ್ತಿಯಲ್ಲಿ ತೃತೀಯಲಿಂಗಿ ಫೈಜುಲ್ಲಾನ್ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪುನರಾಯ್ಕೆ ಬಯಸಿ ಸ್ಪರ್ಧೆಗಿಳಿದಿರುವ ಫೈಜುಲ್ಲಾನ್, ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಏಕೈಕ ತೃತೀಯಲಿಂಗಿ. ಕಳೆದ ಬಾರಿಯೂ ಜಯಗಳಿಸಿದ್ದ ಇವರು, ಅಭಿವೃದ್ಧಿ ಕೆಲಸಗಳಿಂದಾಗಿ ಜನಮನ ಗೆದ್ದಿದ್ದಾರೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ನನಗೆ ಶ್ರೀರಕ್ಷೆಯಾಗಿವೆ. ಯಾರೇ ಎದುರಾಳಿ ಆಗಿದ್ದರೂ ನಾನು ಗೆದ್ದು ಮತ್ತೆ ನಮ್ಮ ಊರಿನ ಕೆಲಸ ಮಾಡಲು ಕಂಕಣಬದ್ಧವಾಗಿ ನಿಲ್ಲುತ್ತೇನೆ. ನನ್ನ ಗ್ರಾಮದ ಜನ ನನ್ನನ್ನು ಮತ್ತೊಮ್ಮೆ ಆಯ್ಕೆಮಾಡುವ ವಿಶ್ವಾಸ ನನ್ನಲ್ಲಿದೆ ಎನ್ನುತ್ತಾರೆ ಅಭ್ಯರ್ಥಿ ಫೈಜುಲ್ಲಾನ್.
ಚುನಾವಣೆ ಬಹಿಷ್ಕಾರ : ಶಿರಾ ತಾಲೂಕಿನ ಗೋಪಾಲದೇವರಹಳ್ಳಿ ವ್ಯಾಪ್ತಿಯ ಯಾವುದೇ ಕೆರೆ ಕಟ್ಟೆಗಳಿಗೆ ಕುಡಿಯುವ ನೀರಿನ ಅಲೋಕೇಶನ್ ಇರುವುದಿಲ್ಲ. ದೊಡ್ಡ ಅಗ್ರಹಾರ ಕೆರೆಗೆ ಭದ್ರಾಮೇಲ್ದಂಡೆ ಯೋಜನೆ ನೀರು ಬರಲಿದ್ದು, ನಮ್ಮ ಪಂಚಾಯಿತಿ ವ್ಯಾಪ್ತಿಗೆ ಬರುವ ಯಾವುದೇ ಕೊಳವೆಬಾವಿಗಳಿಗೆ ಅಂತರ್ಜಲ ಅಭಿವೃದ್ಧಿಯಾಗುವುದಿಲ್ಲ. ನಮ್ಮ ಸುತ್ತಮುತ್ತ 5 ಕಿಲೋ ಮೀಟರ್ ಅಂತರವಿರುವ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ಅನುಮೋದನೆಯಾಗಿದ್ದು, ಗೋಪಾಲದೇವರಹಳ್ಳಿ ಪಂಚಾಯಿತಿಗೆ ಮಲತಾಯಿ ಧೋರಣೆ ಸರಿಯಲ್ಲ ಎಂಬುದು 12 ಹಳ್ಳಿಗಳ ಗ್ರಾಮಸ್ಥರ ಒಕ್ಕೊರಲ ಆಗ್ರಹವಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದಾರೆ.