ಜಿಲ್ಲೆ

ದ.ಕ ಜಿಲ್ಲೆಯಲ್ಲಿ ದ್ವಿತೀಯ ಪಿಯು ಭೌತಿಕ ತರಗತಿ ಆರಂಭ

reportermng

ಮಂಗಳೂರು: ಹಲವು ತಿಂಗಳುಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಭೌತಿಕ ತರಗತಿಗಳು ಬುಧವಾರದಿಂದ ಆರಂಭಗೊಂಡಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ಶೇ. 50 ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಆರಂಭಿಸಲು ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ. ಅದರಂತೆ ಆನ್‌ಲೈನ್ ತರಗತಿಗಳಿಗೆ ಒಗ್ಗಿಕೊಂಡಿದ್ದ, ಬೇಸತ್ತಿದ್ದ ವಿದ್ಯಾರ್ಥಿಗಳು ಈಗ ಖುಷಿಯಿಂದಲೇ ಕಾಲೇಜುಗಳತ್ತ ಹೆಜ್ಜೆ ಹಾಕಿದ್ದಾರೆ. ಕಾಲೇಜಿಗೆ ಬಾರದ ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪಾಠ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಸರ್ಕಾರಿ ಪಪೂ ಕಾಲೇಜುಗಳಲ್ಲಿ ಜಿಲ್ಲಾಡಳಿತ ನಿರ್ದೇಶನದಂತೆ ತರಗತಿ ಆರಂಭವಾಗಿದ್ದು, ಖಾಸಗಿಯ ಪೈಕಿ ಕೆಲವೊಂದು ಕಾಲೇಜುಗಳು ಸೆ.15ರ ಬಳಿಕವೇ ತರಗತಿ ಆರಂಭಿಸಲು ನಿರ್ಧರಿಸಿವೆ. ಎಲ್ಲ ವಿದ್ಯಾರ್ಥಿಗಳನ್ನು ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸ್ ಮಾಡಿ, ದೇಹತಾಪ ಮಾನ ತಪಾಸಣೆ ಮಾಡಿ ಒಳಗೆ ಬಿಡಲಾಯಿತು. ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕೆಲವು ಕಾಲೇಜುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.