ಜಿಲ್ಲೆ

ಪಾತ್ರಾಭಿನಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ : ವಿಜೇತ ತಂಡಕ್ಕೆ ಅದ್ದೂರಿ ಸ್ವಾಗತ

ಸೌಮ್ಯ ಆರ್

ಸುಳ್ಯ: ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದು, ಸೋಮವಾರ ವಿದ್ಯಾರ್ಥಿಗಳು ಸುಳ್ಯಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಸಮೂಹ ಮಾಧ್ಯಮಗಳ ಸುರಕ್ಷಿತ ಬಳಕೆ ಎಂಬ ವಿಷಯದ ಮೇಲೆ ಆಂಗ್ಲ ಭಾಷೆಯಲ್ಲಿ ಪ್ರಸ್ತುತಪಡಿಸಿದ ಪಾತ್ರಾಭಿನಯವನ್ನು ಸಂಸ್ಥೆಯ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ರಚಿಸಿ ನಿರ್ದೇಶನ ಮಾಡಿದ್ದರು. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಪೌರ್ಣಮಿ ಕೆ., ಹಿಮಾದ್ರಿ ಸಿ.ಎಂ., ತನ್ವಿ ಕೆ.ಟಿ., ಅಶ್ವಿತಾ ಎಂ.ಡಿ., ಗಹನಾ ಎಸ್. ಅವರನ್ನೊಳಗೊಂಡ ವಿಜೇತ ತಂಡದ ಮಾರ್ಗದರ್ಶಕರಾಗಿ ಸಮಾಜ ವಿಜ್ಞಾನ ಶಿಕ್ಷಕರಾದ ಪೂರ್ಣಿಮಾ ಟಿ.ಹಾಗೂ ಗಣಿತ ಶಿಕ್ಷಕರಾದ ಲತಾ ವೆಂಕಟೇಶ ಪೈ ಭಾಗವಹಿಸಿದ್ದರು.

ಪದ್ಮಶ್ರೀ ಪರಸ್ಕೃತ ಗಿರೀಶ್ ಭಾರದ್ವಾಜ್, ತಹಸೀಲ್ದಾರ್ ಮಂಜುಳಾ, ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯ ಡೇವಿಡ್ ಧೀರ ಕ್ರಾಸ್ತ, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ಶಿಕ್ಷಣಾಧಿಕಾರಿ ಶೀತಲ್ ಯು.ಕೆ., ನ.ಪಂ.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ಜನಾರ್ದನ ಮಾಸ್ಟರ್ ಗಣಿತ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಬಿ.ಸದಾಶಿವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕೋಶಾಧಿಕಾರಿ ರಾಮಚಂದ್ರ ಪಲ್ಲತಡ್ಕ, ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಶಿವಪ್ರಸಾದ್ ಆಲೆಟ್ಟಿ, ಹಿರಿಯರಾದ ಬಾಪು ಸಾಹೇಬ್, ಎಸ್.ಡಿ.ಎಂ.ಸಿ.ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಸಿಆರ್‌ಪಿ ಮಮತಾ ಪಡ್ಡಂಬೈಲು, ಶಿಕ್ಷಕ ಚಿನ್ನಪ್ಪ ಮಾಸ್ಟರ್, ನಟರಾಜ್ ಎಂ.ಎಸ್., ಯೂಸುಫ್ ಅಡ್ಕ ಇದ್ದರು. ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿದರು. ಬಳಿಕ ಕಾಲೇಜಿನವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.