ಬೆಂಗಳೂರು: ವರ್ಷಾಂತ್ಯಕ್ಕೆ ಮೆಟ್ರೋ 2ನೇ ಹಂತದ 3 ಮಾರ್ಗಗಳಲ್ಲಿ ರೈಲು ಸಂಚರಿಸುವಂತೆ ಮಾಡಲು ಬಿಎಂಆರ್ಸಿಎಲ್ ನಿರ್ಧರಿಸಿತ್ತು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಆ ಮಾರ್ಗಗಳಲ್ಲಿ ರೈಲು ಸಂಚಾರ ಮತ್ತಷ್ಟು ವಿಳಂಬವಾಗಲಿದೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ಸಲುವಾಗಿ ನಮ್ಮ ಮೆಟ್ರೋ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೆ ಮೊದಲ ಹಂತದಲ್ಲಿನ 42 ಕಿ.ಮೀ. ಉದ್ದ ಮಾರ್ಗದಲ್ಲಿ ರೈಲುಗಳು ಸಂಚರಿಸುತ್ತಿವೆ. ಇದೀಗ 2ನೇ ಹಂತದಲ್ಲಿ 72 ಕಿ.ಮೀ. ಉದ್ದದ ಮಾರ್ಗ ನಿರ್ವಿುಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದರಂತೆ ಮೊದಲ ಹಂತದ ನಾಲ್ಕು ಮಾರ್ಗಗಳ ವಿಸ್ತರಣೆ, ಎರಡು ಹೊಸ ಮಾರ್ಗ ಮತ್ತು ಒಂದು ಸುರಂಗ ಮಾರ್ಗ ನಿರ್ವಿುಸಲಾಗುತ್ತಿದೆ. ಅದರಲ್ಲಿ ವಿಸ್ತರಣೆ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಈ ವರ್ಷ ಅಥವಾ ಮುಂದಿನ ವರ್ಷ ಮಧ್ಯದಲ್ಲಿ ನಾಲ್ಕು ಮಾರ್ಗಗಳಲ್ಲಿ ರೈಲು ಸಂಚಾರಿಸುವಂತೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈಲು ಸಂಚಾರದ ಗಡುವು ಮೀರಲಿದೆ.
ಶೇ. 96 ಕಾಮಗಾರಿ ಪೂರ್ಣ: 2ನೇ ಹಂತದ ಮೆಟ್ರೋ ಎಲಿವೇಟೆಡ್ ಮಾರ್ಗದ ಕಾಮಗಾರಿಯಂತೆ ಒಂದು ಮಾರ್ಗ ಶೇ. 90, ಎರಡು ಮಾರ್ಗ ಶೇ. 80 ಮತ್ತು ಮೂರು ಮಾರ್ಗಗಳಲ್ಲಿ ಶೇ. 70 ಕಾಮಗಾರಿ ಪೂರ್ಣಗೊಂಡಿವೆ. ನಾಯಂಡಹಳ್ಳಿಯಿಂದ ಪಟ್ಟಣಗೆರೆ ಮಾರ್ಗದಲ್ಲಿ (ರೀಚ್ 2ಎ) ಸೆಪ್ಟೆಂಬರ್ನಲ್ಲಿ, ಪುಟ್ಟೇನಹಳ್ಳಿ ಕ್ರಾಸ್ನಿಂದ ಅಂಜನಾಪುರ ಟೌನ್ಶಿಪ್ (ರೀಚ್ 4ಬಿ) ಮತ್ತು ಪಟ್ಟಣಗೆರೆಯಿಂದ ಚಲ್ಲಘಟ್ಟವರೆಗಿನ (ರೀಚ್ 2ಬಿ) ಮಾರ್ಗಗಳಲ್ಲಿ ವರ್ಷಾಂತ್ಯಕ್ಕೆ ರೈಲು ಸಂಚರಿಸುವಂತೆ ಮಾಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಕರೊನಾ ಸೋಂಕು ಹರಡುವ ಭೀತಿಯಿಂದಾಗಿ 20 ದಿನಗಳ ಹಿಂದೆಯೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಾರ್ವಿುಕರನ್ನು ಅವರವರ ಊರಿಗೆ ಕಳುಹಿಸಲಾಗಿದೆ. ಹೀಗಾಗಿ ಮೆಟ್ರೋ ಯೋಜನೆ ಹಿನ್ನಡೆ ಕಾಣುವಂತಾಗಿದೆ.
ಸುರಂಗ ನಿರ್ವಣವೂ ಸ್ಥಗಿತ
ಮೆಟ್ರೋ 2ನೇ ಹಂತದ ಏಕೈಕ ಸುರಂಗ ಮಾರ್ಗ ನಿರ್ವಣಕ್ಕೆ ಕಳೆದ ವಾರವಷ್ಟೇ ಚಾಲನೆ ನೀಡಲಾಗಿತ್ತು. ಬಂಬೂ ಬಜಾರ್ನಲ್ಲಿ ನಿರ್ವಿುಸಲಾಗಿರುವ ಶಾಫ್ಟ್ನಲ್ಲಿ (ವೃತ್ತಾಕಾರದ ಗುಂಡಿ)ಸುರಂಗ ಕೊರೆಯುವ ಯಂತ್ರ ತನ್ನ ಕಾರ್ಯ ಆರಂಭಿಸಿತ್ತು. ಆ ಯಂತ್ರಗಳನ್ನು ಚೀನಾದಿಂದ ತರಿಸಲಾಗಿತ್ತು. ಇದೀಗ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಏ.14ರವರೆಗಿಲ್ಲ ರೈಲು ಸಂಚಾರ
ಮೆಟ್ರೋ ರೈಲು ಸಂಚಾರದ ಬಗ್ಗೆ ಇದ್ದ ವದಂತಿಗಳಿಗೆ ತೆರೆ ಎಳೆದಿರುವ ಬಿಎಂಆರ್ಸಿಎಲ್, ಏ.14ರವರೆಗೆ ಯಾವುದೇ ರೀತಿಯ ರೈಲು ಸಂಚಾರವೂ ಇರುವುದಿಲ್ಲ ಎಂದು ತಿಳಿಸಿದೆ. ಆದರೆ, ಮೆಟ್ರೋ ರೈಲು ಸಂಚಾರವನ್ನು ಸುಸ್ಥಿತಿಯಲ್ಲಿರುವಂತೆ ಮಾಡಲು ಮತ್ತು ಪವರ್ ಮೋಡ್ನಲ್ಲಿರುವಂತೆ ಮಾಡಲು ಎರಡು ಮಾರ್ಗದಲ್ಲೂ ಬೆಳಗ್ಗೆ ಮತ್ತು ಸಂಜೆ ತಲಾ ಒಂದೊಂದು ರೈಲು ಸಂಚರಿಸುತ್ತವೆ.